9 ಸಾವಿರ ಸಾಲ ಪಾವತಿಸಲು ಸಾಧ್ಯವಾಗದ ರೈತ ಆತ್ಮಹತ್ಯೆಗೆ ಶರಣು

Update: 2019-04-25 16:21 GMT

ಹೊಸದಿಲ್ಲಿ, ಎ. 25: ಒಂಬತ್ತು ಸಾವಿರ ಸಾಲ ಮರು ಪಾವತಿಸಲು ಸಾಧ್ಯವಾಗದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮುಖ್ಯಮಂತ್ರಿ ಕಮಲ್‌ನಾಥ್ ಅವರ ತವರು ಕ್ಷೇತ್ರವಾದ ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಗುರುವಾರ ಸಂಭವಿಸಿದೆ.

ಮೇಘಾಸಿವ್ನಿ ಗ್ರಾಮದ ನಿವಾಸಿ ಅಕಾಡು ಉಯಿಕೆ ಅವರು ಕೊಟ್ಟಿಗೆಯಲ್ಲಿ ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘‘ಅವರು ಸ್ಥಳೀಯ ಸಾಲದಾತರಿಂದ ಮಗಳ ವಿವಾಹಕ್ಕೆ 9000 ಸಾಲ ಪಡೆದುಕೊಂಡಿದ್ದರು. ಆದರೆ, ಮರು ಪಾವತಿಸಲು ಸಾಧ್ಯವಾಗಿರಲಿಲ್ಲ’’ ಎಂದು ಅವರ ಪತ್ನಿ ಸಕಲ್‌ಬತಿ ಹೇಳಿದ್ದಾರೆ. ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಬೆಳೆ ವಿಫಲತೆಯ ಸಂಕಷ್ಟಕ್ಕೆ ಒಳಗಾಗಿತ್ತು. ಕಳೆದ ಒಂದು ವಾರದಿಂದ ಅವರು ಖಿನ್ನರಾಗಿದ್ದರು ಎಂದು ಸಕಲ್‌ಬತಿ ಹೇಳಿದ್ದಾರೆ.

‘‘ನನಗೆ ಸಾಲದ ಬಗ್ಗೆ ಹೆಚ್ಚು ಚಿಂತೆ ಇರಲಿಲ್ಲ. ನಮಗೆ ಪುತ್ರನಿದ್ದ. ಆತ ಕಲಿಕೆಯಲ್ಲಿ ಮುಂದಿದ್ದ. ಸಾಲವನ್ನು ಕಂತುಗಳಾಗಿ ಕಟ್ಟಿ ತೀರಿಸಬಹುದು ಎಂದು ನಾನು ಭಾವಿಸಿದ್ದೆ. ಹಣ ನೀಡಿದವರು ಪಾವತಿಸುವಂತೆ ಕೂಡ ಕೇಳಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News