ಮಂಗಳೂರು: ಸಮುದ್ರ ತೀರದಲ್ಲಿ ತೇಲುತ್ತಿರುವ ಡಾಂಬರು !

Update: 2019-04-25 16:51 GMT

ಮಂಗಳೂರು, ಎ. 25: ಪ್ರಕೃತಿಯ ಮೇಲಾಗುತ್ತಿರುವ ಹಲ್ಲೆಗೆ ಸಾಕ್ಷಿ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರದ ಅಂಚಿನ ನೀರಿನಲ್ಲಿ ಇದೀಗ ಡಾಂಬರು ಅಂಶ ಪತ್ತೆಯಾಗಿದೆ. ಕಳೆದ ಕೆಲ ದಿನಗಳಿಂದ ಬೈಕಂಪಾಡಿ, ಹೊಸಬೆಟ್ಟು, ಗುಡ್ಡೆಕೊಪ್ಪ, ಸಸಿಹಿತ್ಲು ಬಳಿ ಸಮುದ್ರದ ನೀರಿನ ಅಂಚಿನಲ್ಲಿ ಡಾಂಬರು ತೇಲಿ ಬರುತ್ತಿದೆ. ತೀರದಲ್ಲಿ ಉಂಡೆ ರೂಪದಲ್ಲಿ ಸಂಗ್ರಹವಾಗುತ್ತಿರುವ ಈ ಡಾಂಬರು ಇದೀಗ ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ.

ಇದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲವಾದರೂ, ಸಮುದ್ರದಲ್ಲಿ ತೈಲ ಸಾಗಾಟದ ಹಡಗನ್ನು ಶುಚಿಗೊಳಿಸಿರುವುದು ಅಥವಾ ಕೈಗಾರಿಕೆಗಳ ತ್ಯಾಜ್ಯವೂ ಇರಬಹುದು ಎಂಬುದು ಸ್ಥಳೀಯ ಮೀನುಗಾರರ ಅನುಮಾನ.

ಸಮುದ್ರದ ನಾಡಿನಲ್ಲೇ ಮೀನಿಗೆ ಬರ

ಕರಾವಳಿಯೆಂದರೆ ಸಮುದ್ರಗಳ ಬೀಡು. ಇಲ್ಲಿ ಮೀನಿಗೇನೂ ಕೊರತೆ ಇಲ್ಲ. ಮೀನುಗಾರಿಕೆಯೇ ಇಲ್ಲಿಯ ಪ್ರಮುಖ ಉದ್ಯಮ ಕೂಡಾ. ಆದರೆ ಇದೀಗ ಸಮುದ್ರದಲ್ಲಿ ಮೀನಿನ ಬರವನ್ನು ಮೀನುಗಾರರು ಎದುರಿಸುತ್ತಿದ್ದಾರೆ. ಸಮುದ್ರದಲ್ಲಿ ಕೈಗಾರಿಕೆಗಳ ತ್ಯಾಜ್ಯ ಸೇರಿ ಸಾಕಷ್ಟು ಕಲುಷಿತವಾಗಿರುವುದು ಕೂಡಾ ಮೀನುಗಳ ಸಂತತಿ ನಾಶಕ್ಕೆ ಕಾರಣವಾಗುತ್ತಿದೆ ಎಂಬ ಗುಮಾನಿಯನ್ನು ಹುಟ್ಟಿಹಾಕಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನವೂ ನಡೆಯಬೇಕಾಗಿದೆ.

ಸಮುದ್ರದಲ್ಲಿ ಇದೀಗ ಕಂಡು ಬರುತ್ತಿರುವ ಡಾಂಬರು ಉಂಡೆಗಳು ಜಲಚರಗಳಿಗೆ ಮಾರಕವಾಗಿದ್ದು, ಈ ಬಗ್ಗೆ ಪರಿಸರ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂಬುದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗೆ ದೂರು

ಎ. 22ರ ಸಂಜೆಯಿಂದ ಪಣಂಬೂರು ಬೀಚ್ ತೀರದಲ್ಲಿ ಉಂಡೆಯಾಕಾರದಲ್ಲಿ ಡಾಂಬರು ಸಂಗ್ರಹವಾಗಿದ್ದು, ಈವರೆಗೂ ಇದು ಮುಂದುವರಿದಿದೆ. ಕರಾವಳಿ ಯುದ್ದಕ್ಕೂ ಈ ರೀತಿಯ ಡಾಂಬರು ಸಮುದ್ರದಲ್ಲಿ ತೇಲಿ ದಡ ಸೇರುತ್ತಿರುವುದನ್ನು ಮೀನುಗಾರರು ಗಮನಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಗಮನ ಹರಿಸುವಂತೆ ಕರಾವಳಿ ತಟ ರಕ್ಷಣಾ ಪಡೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಎನ್‌ಎಂಪಿಟಿಗೆ ಮಾಹಿತಿ ನೀಡಿದ ಕ್ರಮ ಕೈಗೊಳ್ಳಬೇಕು ಎಂದು ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ದಿ ಪ್ರಾಜೆಕ್ಟ್‌ನ ಮುಖ್ಯಸ್ಥ ಯತೀಶ್ ಬೈಕಂಪಾಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News