2025ಕ್ಕೆ ರಾಜ್ಯ ಮಲೇರಿಯಾ ಮುಕ್ತದ ಗುರಿ: ಉಡುಪಿ ಜಿಲ್ಲಾ ಡಿಎಚ್‌ಒ

Update: 2019-04-25 17:09 GMT

ಉಡುಪಿ, ಎ. 25: 2025ರ ವೇಳೆಗೆ ರಾಜ್ಯವನ್ನು ಮಲೇರಿಯಾ ರೋಗದಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ 2022 ರಿಂದಲೇ ಈ ಗುರಿ ಸಾಧನೆಯತ್ತ ಮುನ್ನಡೆಯಬೇಕಾಗಿದೆ. ಅದೇ ರೀತಿ 2030ರ ವೇಳೆಗೆ ದೇಶವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯೂ ಇದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓಂಪ್ರಕಾಶ್ ಕಟ್ಟಿಮನಿ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹನ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಗಿರಿಯಲ್ಲಿರುವ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಲಾದ ವಿಶ್ವ ಮಲೇರಿಯಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ನಾವಾಗೇ ಆಹ್ವಾನಿಸಿಕೊಳ್ಳುವ ರೋಗಗಳಾಗಿರುತ್ತವೆ. ರೋಗಗಳ ಕುರಿತು ಜಾಗೃತಿ, ಪರಿಸರ ಸ್ವಚ್ಚತೆ, ಶಿಸ್ತು ಬದ್ದ ಜೀವನ, ಸ್ವಚ್ಛ ಒಳಚರಂಡಿ, ಗ್ರಾಮ ಸ್ವಚ್ಛವಾಗಿದ್ದರೆ ಹೆಚ್ಚಿನ ರೋಗಗಳನ್ನು ಸುಲಭದಲ್ಲಿ ನಿಯಂತ್ರಣದಲ್ಲಿರಿಸಬಹುದು ಎಂದವರು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಅವರು ವಿಶ್ವ ಮಲೇರಿಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮಾನವನ ನಿಯಂತ್ರಣದಲ್ಲಿರ ಬಹುದಾದ ಮಲೇರಿಯಾದಂಥ ರೋಗಗಳಲ್ಲಿ, ಬುದ್ಧಿವಂತರ ಹಾಗೂ ಮುಂದುವರಿದ ಜಿಲ್ಲೆಗಳೆನಿಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಮುಂಚೂಣಿ ಯಲ್ಲಿರುವುದು ನಿಜವಾಗಿಯೂ ವಿಷಾಧನೀಯ ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದಿವಾಕರ ಹಿರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಲೇರಿಯಾಧಿಕಾರಿ ಡಾ.ಪ್ರಶಾಂತ್ ಭಟ್ ಅವರು ಮಲೇರಿಯಾ ಹಾಗೂ ಇತರ ಆಶ್ರಿತ ರೋಗದ ಕುರಿತು ಸಮಗ್ರ ಮಾಹಿತಿಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News