ಕುರ್ಕಾಲು: ಮನೆಗೆ ನುಗ್ಗಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2019-04-25 17:11 GMT

ಶಿರ್ವ, ಎ.25: ಮನೆಯಲ್ಲಿ ಎಲ್ಲರೂ ಮಲಗಿರುವಂತೆಯೇ ಬೆಡ್‌ರೂಮಿಗೆ ನುಗ್ಗಿದ ಕಳ್ಳರು ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ 195 ಗ್ರಾಂ ಚಿನ್ನಾಭರಣ ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ಕಾಲು ಗ್ರಾಪಂನ ಶಂಕರಪುರದಿಂದ ವರದಿಯಾಗಿದೆ.

ಶಂಕರಪುರದ ಐರಿನ್ ಮಾರ್ಟಿಸ್ ಎಂಬವರ ಮನೆಗೆ ರಾತ್ರಿ 12:30 ರಿಂದ ಬೆಳಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಅಡುಗೆ ಮನೆಯ ಹೆಂಚು ತೆಗೆದು ಒಳಬಂದ ಕಳ್ಳರು ಬೆಡ್‌ರೂಮಿನ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಐರಿನ್ ಅವರ ಪತಿ, ಮಗ ಹಾಗೂ ಮಗಳು ಅಲ್ಲದೇ ಕೆಲಸದಾಕೆ ಇರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

ಕಳ್ಳರು ಐರಿನ್ ಅವರ 40ಗ್ರಾಂ ತೂಕದ ಚಿನ್ನದ ಕರಿಮಣಿ ಸರ-1, 40ಗ್ರಾಂ ತೂಕದ ಬಂಗಾರದ ಬಳೆ-4, 9ಗ್ರಾಂ ತೂಕದ ಚಿನ್ನದ ಉಂಗುರ-2, 15 ಗ್ರಾ.ಪಂ. ತೂಕದ ದಪ್ಪದ ಚಿನ್ನದ ಬಳೆ-1, ಐರಿನ್ ಅವರ ತಂಗಿ ಪ್ಲಾರೆಟಾ ಅವರ 60ಗ್ರಾಂ ತೂಕದ ಚಿನ್ನದ ಬಳೆ-4, 7ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, ಅಲ್ಲದೇ ಮಗಳು ದಿವ್ಯ ಮಿನೇಜಸ್ ಅವರ 12 ಗ್ರಾಂ ತೂಕದ ಚಿನ್ನದ ಬಳೆ-1, 12ಗ್ರಾಂ ತೂಕದ ಚಿನ್ನದ ಸರ-1ನ್ನು, ಒಟ್ಟು 195ಗ್ರಾಂ ತೂಕದ 3.90 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಮನೆಯ ಬಗ್ಗೆ ಸಂಪೂರ್ಣ ಅರಿವು ಹೊಂದಿರುವವರೇ ಈ ಕಳ್ಳತನದಲ್ಲಿ ಭಾಗಿಯಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News