ಶ್ರೀಲಂಕಾದ ನೆಗೊಂಬೊ ಪಟ್ಟಣದಿಂದ ನೂರಾರು ಮುಸ್ಲಿಮರ ವಲಸೆ

Update: 2019-04-25 17:27 GMT

ನೆಗೊಂಬೊ (ಶ್ರೀಲಂಕಾ), ಎ. 25: ಈಸ್ಟರ್ ರವಿವಾರದಂದು ಚರ್ಚ್‌ಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಯುತ್ತಿದ್ದಂತೆಯೇ, ಶ್ರೀಲಂಕಾದ ಪಶ್ಚಿಮ ಕರಾವಳಿಯಲ್ಲಿರುವ ನೆಗೊಂಬೊ ಪಟ್ಟಣದಿಂದ ನೂರಾರು ಮುಸ್ಲಿಮ್ ನಿರಾಶ್ರಿತರು ವಲಸೆ ಹೊರಟಿದ್ದಾರೆ.

ನೆಗೊಂಬೊದ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರ ಅಂತಿಮ ಸಂಖ್ಯೆ 200ನ್ನು ತಲುಪಬಹುದು ಎಂಬ ಭೀತಿಯನ್ನು ಚರ್ಚ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಆರು ಸ್ಥಳಗಳಲ್ಲಿ ನಡೆದ ಬಾಂಬ್ ದಾಳಿಗಳ ಪೈಕಿ, ನೆಗೊಂಬೊ ದಾಳಿ ಅತ್ಯಂತ ಭೀಕರವಾಗಿತ್ತು ಎನ್ನಲಾಗಿದೆ.

ಶ್ರೀಲಂಕಾ ರಾಜಧಾನಿ ಕೊಲಂಬೊದಿಂದ ಒಂದು ಗಂಟೆಯ ಪ್ರಯಾಣ ಹೊಂದಿರುವ ನೆಗೊಂಬೊ ಬಂದರು ನಗರದಿಂದ ಬುಧವಾರ ನೂರಾರು ಪಾಕಿಸ್ತಾನಿ ಮುಸ್ಲಿಮರು ಪಲಾಯನಗೈದಿದ್ದಾರೆ. ಸ್ಥಳೀಯರು ಪ್ರತೀಕಾರದ ಬೆದರಿಕೆಗಳನ್ನು ಹಾಕಿದ ಬಳಿಕ, ಸಮುದಾಯ ನಾಯಕರು ಮತ್ತು ಪೊಲೀಸರು ವ್ಯವಸ್ಥೆ ಮಾಡಿರುವ ಬಸ್‌ಗಳಲ್ಲಿ ಅವರು ಹೊರಟಿದ್ದಾರೆ.

 ‘‘ಶ್ರೀಲಂಕಾದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟಗಳ ಬಳಿಕ, ಸ್ಥಳೀಯರು ನಮ್ಮ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ’’ ಎಂದು ಪಾಕಿಸ್ತಾನಿ ಮುಸ್ಲಿಮ್ ಅದ್ನಾನ್ ಅಲಿ ಬಸ್ಸೇರುತ್ತಿರುವಂತೆಯೇ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದರು. ‘‘ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವುದು ನಮಗೆ ತಿಳಿದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News