×
Ad

ಪಾಣೆಮಂಗಳೂರಿನಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಮೃತ್ಯು

Update: 2019-04-26 14:44 IST

ಬಂಟ್ವಾಳ, ಎ. 26: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯರಿಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರ ಗಾಯಗೊಂಡ ಘಟನೆ ಬಿ.ಸಿ.ರೋಡಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಳೆ ಟೋಲ್‍ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಮಂಗಳೂರು ಜಪ್ಪುಗುಡ್ಡೆ ನಿವಾಸಿಗಳಾದ ರುಕ್ಮಿಣಿ ಸಿ. ಮಲ್ಲಿ (63) ಮತ್ತು ಸರೋಜಿನಿ ಟಿ. ಶೆಟ್ಟಿ (65) ಮೃತರು ಎಂದು ಗುರುತಿಸಲಾಗಿದೆ.

ಕಾರಿನಲ್ಲಿದ್ದ ಅನುಷಾ (40), ಮಂಗಳೂರಿನ ಶಕ್ತಿನಗರ ನಿವಾಸಿ, ಕಾರು ಚಾಲಕ ಉಮೇಶ್ (45) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ನರಿಕೊಂಬು ಪರಿಸರದಲ್ಲಿ ನಡೆಯುತ್ತಿದ್ದ ಗೃಹಪ್ರವೇಶಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿದೆ ಎಂಬ ಮಾಹಿತಿ ಲಭಿಸಿದೆ.

ಘಟನೆ

ಮಂಗಳೂರಿನಿಂದ ಪಾಣೆಮಂಗಳೂರು ಕಡೆಗೆ ಸಾಗುತ್ತಿದ್ದ ಮಾರುತಿ ಕಾರಿಗೆ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಪಾಣೆಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಸಾಗರ್ ಆಡಿಟೋರಿಯಂ ಎದುರು ಮುಖಾಮುಖಿ ಢಿಕ್ಕಿಯಾಗಿ ಈ ಭೀಕರ ಅಪಘಾತ ಸಂಭವಿಸಿದೆ.

ಪರಿಣಾಮ ಕಾರು ಚಾಲಕ ಸಹಿತ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಬಂಟ್ವಾಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರುಕ್ಮಿಣಿ ಮತ್ತು ಸರೋಜಿನಿ ಶೆಟ್ಟಿ ಮೃತಪಟ್ಟಿದ್ದು, ಕಾರು ಚಾಲಕ ಉಮೇಶ್ ಹಾಗೂ ಅನುಷಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬಸ್‍ನ ಎದುರುಭಾಗ ಜಖಂಗೊಂಡಿದೆ. ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News