ಸುಸ್ಥಿರ ಕೃಷಿಯಿಂದ ಮಣ್ಣಿನ ಫಲವತ್ತತೆ, ಆಹಾರದ ಪೌಷ್ಠಿಕತೆ ಹೆಚ್ಚಳ : ಡಾ. ಅಲೋಕ್ ಕುಮಾರ್

Update: 2019-04-26 15:28 GMT

ಮಂಗಳೂರು, ಎ. 26: ಸುಸ್ಥಿರ ಕೃಷಿಯಿಂದ ಮಣ್ಣಿನ ಫಲವತ್ತತೆ ಹಾಗೂ ಆಹಾರದ ಪೌಷ್ಠಿಕಾಂಶ ಹೆಚ್ಚಳವಾಗುತ್ತದೆ ಎಂದು ಮೈಸೂರಿನ ಸಿಎಫ್ ಟಿಆರ್ ಐ ವಿಜ್ಞಾನಿ ಡಾ. ಅಲೋಕ್ ಕುಮಾರ್ ಶ್ರೀವಾಸ್ತವ್ ತಿಳಿಸಿದ್ದಾರೆ.

ಅವರು ಇನೋಳಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ಆವರಣದ ಅಂತರ್ ರಾಷ್ಟ್ರೀಯ ಸಭಾಂಗಣದಲ್ಲಿ 'ಸುಸ್ಥಿರ ನಗರಾಭಿವೃದ್ಧಿ, ಸಂಪನ್ಮೂಲ ಸಂರಕ್ಷಣೆ ಮತ್ತು ಆಹಾರ ಭದ್ರತೆ' ವಿಷಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅಂತರ್ ರಾಷ್ಟ್ರೀಯ ಕಾರ್ಯಾಗಾರಕ್ಕೆ ಶುಕ್ರವಾರ ಚಾಲನೆ ನೀಡಿ‌ ಮಾತನಾಡಿದರು.

ಪ್ರಪಂಚದ ಒಟ್ಟು ಜನಸಂಖ್ಯೆಯ 18.7% ಹೊಂದಿರುವ ಭಾರತ ಒಟ್ಟು ಭೂ ಭಾಗದಲ್ಲಿ ಶೇ. 2.7 ಮಾತ್ರ ಹೊಂದಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಹಸಿರು ( ಕೃಷಿ ), ನೀಲಿ (ಮೀನು ಉತ್ಪಾದನೆ ), ಬಿಳಿ (ಹಾಲು) ಕ್ರಾಂತಿಗಳ ಮೂಲಕ ಆಹಾರ ಉತ್ಪಾದನೆಯಲ್ಲಿ ಭಾರೀ ಪ್ರಗತಿ ಸಾಧಿಸಲಾಯಿತು. ಆದರೆ ಸಾಕಷ್ಟು ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆಗೆ ಹಾನಿಯಾಯಿತು. ಇದು ನಮ್ಮಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣ ವಾಗಿದೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ಕೃಷಿಗೆ ಹೆಚ್ಚಿನ ಗಮನಹರಿಬೇಕಾಗಿದೆ. ಇನ್ನು ದೇಶದ ದೊಡ್ಡ ಪ್ರಮಾಣದ ಜನಸಂಖ್ಯೆ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದೆ. ಇದನ್ನು ನಾವು ಎದುರಿಸಬೇಕಾಗಿದೆ ಎಂದವರು ಹೇಳಿದರು.

ಬ್ಯಾರೀಸ್ ಗ್ರೂಪ್  ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮನುಷ್ಯ ನ ದುರಾಸೆಯಿಂದ ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಲು ಕಾರಣವಾಗಿದೆ. ಇದೇ ರೀತಿ ಮುಂದುವರಿದರೆ ಬೆಂಗಳೂರು ಸಹಿತ ಪ್ರಮುಖ ನಗರಗಳ ಜನರು ಬೇಸಿಗೆಯಲ್ಲಿ ಬೇರೆ ಕಡೆ ವಲಸೆ ಹೋಗಬೇಕಾದ ಪರಿಸ್ಥಿತಿ ಎರಡು ಮೂರು ವರ್ಷಗಳಲ್ಲೇ ನಿರ್ಮಾಣವಾಗಲಿದೆ.  ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಗೆ ಕಾರಣವಾಗಿರುವ ಕಲೆ, ಸಂಪತ್ತು ಇತ್ತು.  ತಾಜ್ ಮಹಲ್, ತಮಿಳುನಾಡಿನ ದೇವಾಲಯಗಳ ವಾಸ್ತುಶಿಲ್ಪ ಇವುಗಳಿಗೆ ಕೆಲವು ಉದಾಹರಣೆಗಳಾಗಿವೆ. ಪರಿಸರದ ಸಂಪನ್ಮೂಲಗಳ ರಕ್ಷಣೆ ನಮ್ಮ ಹೊಣೆಗಾರಿಕೆಯಾಗಿದೆ ಎಂದು ಅವರು ವಿವರಿಸಿದರು.

ಮಲೇಷಿಯಾ ಐಐಯುಎಂನ ಪ್ರಾಧ್ಯಾಪಕ ಡಾ. ಎಸ್.ಎ. ಖಾನ್, ಮುಂಬೈಯ ಪರಿಸರ ಪ್ರೇಮಿ ಲೇಖಕ ಭರತ್ ಮನ್ಸಟ, ಹಾರ್ವರ್ಡ್ ವಿಶ್ವವಿದ್ಯಾಲಯದ ಇಕಲಾಜಿಕಲ್ ಆರ್ಕಿಟೆಕ್ಟ್ ದೀಪಾ ವೇದವ್ಯಾಸ್, ಮಧುರೈಯ ಕೃಷಿ ಉದ್ಯಮಿ ಅಮರ್ ನಾದ್ ಅಡುಸುಮಾಲಿ, ಬೀಡ್ಸ್ ಪ್ರಾಂಶುಪಾಲ ಎ. ಆರ್.ಅಶೋಕ್ ಎಲ್.ಪಿ.ಮೆಂಡೋನ್ಸ, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾ. ಅಝೀಝ್ ಮುಸ್ತಫಾ, ಟ್ರಸ್ಟಿ ಮಝರ್ ಬ್ಯಾರಿ, ಕಾರ್ಯಕ್ರಮ ಸಂಯೋಜಕ ಡಾ. ಮುಸ್ತಫಾ ಬಸ್ತಿಕೋಡಿ‌, ಉದ್ಯಮಿ ಅಕ್ರಂ ಸೈಯದ್ ಮೊದಲಾದವರು ಉಪಸ್ಥಿತರಿದ್ದರು.

ಬಿಐಟಿ ಪ್ರಾಚಾರ್ಯ ಡಾ. ಪಿ.ಮಹಾಬಲೇಶ್ವರಪ್ಪ ಸ್ವಾಗತಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News