ಪ್ರಜ್ಞಾ ಸಿಂಗ್ ಮುಸ್ಲಿಮರ ಕ್ಷಮೆ ಯಾಚಿಸದಿದ್ದರೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ: ಬಿಜೆಪಿ ನಾಯಕಿ

Update: 2019-04-26 11:19 GMT

ಭೋಪಾಲ್, ಎ.26: ಅಯೋಧ್ಯೆಯಲ್ಲಿ ಡಿಸೆಂಬರ್ 6, 1992ರಂದು ನಡೆದ ಬಾಬರಿ ಮಸೀದಿ ಧ್ವಂಸದಲ್ಲಿ ತಮ್ಮ ಪಾತ್ರದ ಬಗ್ಗೆ ಹೆಮ್ಮೆಯಿದೆ ಎಂದು ಇತ್ತೀಚೆಗೆ ಸುದ್ದಿ ಸಂಸ್ಥೆಯೊಂದರ ಜತೆಗಿನ ಸಂದರ್ಶನದಲ್ಲಿ ಭೋಪಾಲದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಹೇಳಿರುವ ಬಗ್ಗೆ ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ದೀಖಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಿದ ತಮ್ಮ ಹೇಳಿಕೆಗಳಿಗೆ ಪ್ರಜ್ಞಾ ಸಿಂಗ್ ಕ್ಷಮೆ ಯಾಚಿಸದ ಹೊರತು ಆಕೆಯನ್ನು ತಾನು ಬೆಂಬಲಿಸುವುದಿಲ್ಲ ಎಂದು ಫಾತಿಮಾ ಹೇಳಿದ್ದಾರೆ.

“ಬಿಜೆಪಿಯಲ್ಲಿ ಉತ್ತಮ ಜನರಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರಿಂದಾಗಿ ನಾನು ಬಿಜೆಪಿ ಸೇರಿದೆ. ಆದರೆ ಆಕೆಯ ಹೇಳಿಕೆಗಳಿಂದ ಮುಸ್ಲಿಮರ ಜತೆ ಉತ್ತಮ ಬಾಂಧವ್ಯ ಹೊಂದಿದ ಒಬ್ಬರ ವರ್ಚಸ್ಸಿಗೆ ಧಕ್ಕೆಯಾಗಿದೆ'' ಎಂದು ಫಾತಿಮಾ ಹೇಳಿದ್ದಾರೆ.

“ನಾನು ಗಂಗಾ ಜಮುನಿ ತೆಹಝೀಬ್ ಮೇಲೆ ನಂಬಿಕೆಯಿರಿಸಿದ್ದೇನೆ. ಧಾರ್ಮಿಕ ಭಾವನೆಗಳನ್ನು ನೋಯಿಸುವುದರ ಮೇಲೆ ನನಗೆ ನಂಬಿಕೆಯಿಲ್ಲ. ಇದೇ ಕಾರಣಕ್ಕಾಗಿ ಆಕೆ ಕ್ಷಮೆ ಯಾಚಿಸದ ಹೊರತು ಆಕೆಯ ಜತೆ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಫಾತಿಮಾ ಸ್ಪಷ್ಟ ಪಡಿಸಿದ್ದಾರೆ.

“ಬಿಜೆಪಿ ಬಳಿ ಅಲೋಕ್ ಸಂಜರ್, ಸುರೇಂದ್ರ ಸಿಂಗ್, ವಿಶ್ವಾಸ್ ಸಾರಂಗ್ ಹಾಗೂ ಅಲೋಕ್ ಶರ್ಮ ಅವರಂತಹ ಉತ್ತಮ ಅಭ್ಯರ್ಥಿಗಳಿದ್ದಾರೆ'' ಎಂದು ಹೇಳಿದ ಫಾತಿಮಾ ಅದೇ ಸಮಯ ತಾವು ಪಕ್ಷ ತ್ಯಜಿಸುವ ಸಂಭಾವ್ಯತೆಯನ್ನು ತಳ್ಳಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News