ಬೇಗುಸರಾಯ್: ಮುಸ್ಲಿಮರ ವಿರುದ್ಧ ಹೇಳಿಕೆಗಾಗಿ ಬಿಜೆಪಿ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಪ್ರಕರಣ

Update: 2019-04-26 14:14 GMT

ಬೇಗುಸರಾಯ್(ಬಿಹಾರ),ಎ.26: ಬುಧವಾರ ಇಲ್ಲಿಯ ಜಿ.ಡಿ.ಕಾಲೇಜು ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮುಸ್ಲಿಮರ ವಿರುದ್ಧ ಹೇಳಿಕೆಯನ್ನು ನೀಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರ ವಿರುದ್ಧ ಬೇಗುಸರಾಯ್ ಜಿಲ್ಲಾಡಳಿತವು ಪ್ರಕರಣವನ್ನು ದಾಖಲಿಸಿಕೊಂಡಿದೆ.

ವಂದೇ ಮಾತರಂ ಹೇಳದವರನ್ನು ಅಥವಾ ಮಾತೃಭೂಮಿಯನ್ನು ಗೌರವಿಸದವರನ್ನು ದೇಶವೆಂದೂ ಕ್ಷಮಿಸದು ಎಂದು ತನ್ನ ಭಾಷಣದಲ್ಲಿ ಹೇಳಿದ್ದ ಸಿಂಗ್,ತನ್ನ ಪೂರ್ವಜರು ಸಿಮರಿಯಾ ಘಾಟ್‌ನಲ್ಲಿ ಮೃತಪಟ್ಟಿದ್ದರು ಮತ್ತು ಅವರಿಗಾಗಿ ಸಮಾಧಿಗಳನ್ನು ನಿರ್ಮಿಸಿರಲಿಲ್ಲ,ಆದರೆ ನಿಮಗೆ (ಮುಸ್ಲಿಮರು) ಮೂರು ಗೇಣು ಜಾಗ ಬೇಕು ಎಂದು ಹೇಳಿದ್ದರು. ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಸಂದರ್ಭ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಉಪಸ್ಥಿತರಿದ್ದರು.

ಸಿಂಗ್ ಅವರ ಈ ವ್ಯಂಗ್ಯಾತ್ಮಕ ಹೇಳಿಕೆಯು ಆರ್‌ಜೆಡಿಯ ದರ್ಭಂಗಾ ಲೋಕಸಭಾ ಕೇತ್ರದ ಅಭ್ಯರ್ಥಿ ಅಬ್ದುಲ್ ಬಾರಿ ಸಿದ್ದಿಕಿ ಅವರನ್ನು ಗುರಿಯಾಗಿಸಿಕೊಂಡಿತ್ತು. ಸಿದ್ದಿಕಿ ಅವರು ವಂದೇ ಮಾತರಂ ಉಚ್ಚರಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಸಿಂಗ್ ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಬೇಗುಸರಾಯ್ ಜಿಲ್ಲಾಧಿಕಾರಿ ರಾಹುಲ್ ಕುಮಾರ ಅವರು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಸಿಂಗ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಲ್ಲಿಸಿದ್ದಾರೆ.

ತನ್ಮಧ್ಯೆ ಗುರುವಾರ ದಭಂಗಾ ಜಿಲ್ಲೆಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಸಿಂಗ್ ಅವರ ಹೇಳಿಕೆಯನ್ನು ಪ್ರತಿಧ್ವನಿಸಿದಂತಿದೆ. ವಂದೇ ಮಾತರಂ ಪಠಣವು ಜೀವನ ಶಕ್ತಿಯಂತಿದೆ,ದೇಶದಲ್ಲಿ ಶಾಂತಿ,ಸಮೃದ್ಧಿ ಮತ್ತು ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅದು ಒಂದು ಹೊಣೆಗಾರಿಕೆಯೂ ಆಗಿದೆ. ಆದರೆ ಕೆಲವರಿಗೆ(ಚುನಾವಣಾ ಅಭ್ಯರ್ಥಿಗಳು) ಈ ಬಗ್ಗೆ ಸಮಸ್ಯೆಯಿದೆ. ಅವರು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮಾಡಬೇಕು  ಎಂದು ಮೋದಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News