ನೀವು ತುಂಬ ಕಷ್ಟಪಡುತ್ತಿದ್ದೀರಿ, ನಿಮಗೆ ನಾನು ಋಣಿ: ಮಾಧ್ಯಮಗಳಿಗೆ ಪ್ರಧಾನಿ ಮೋದಿ

Update: 2019-04-26 15:19 GMT

ವಾರಣಾಸಿ,ಎ.26: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ತನ್ನ ಬೆಂಗಾವಲು ವಾಹನಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮತ್ತು ನಂತರ ವಿಮಾನ ನಿಲ್ದಾಣಕ್ಕೆ ಸಾಗುವಾಗ ವಾರಣಾಸಿಯ ಜನರು 44 ಡಿ.ಸೆ.ತಾಪಮಾನವನ್ನೂ ಲೆಕ್ಕಿಸದೆ ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಮೋದಿಯವರತ್ತ ಕೈ ಬೀಸುತ್ತ ಅವರ ವಾಹನದ ಮೇಲೆ ಗುಲಾಬಿ ಹೂವುಗಳ ಪಕಳೆಗಳನ್ನು ಎಸೆಯುತ್ತಿದ್ದರು. ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ ಅವರು ಉರಿಬಿಸಿಲಿನ ಕುರಿತು ಹೇಳಲು ಮರೆಯಲಿಲ್ಲ.

ಗುರುವಾರ ರೋಡ್ ಶೋಗಾಗಿ ಸಂಜೆ ಐದು ಗಂಟೆಗೆ ತಾನು ಆಗಮಿಸುವವರೆಗೂ ಜನರು ಗಂಟೆಗಟ್ಟಲೆ ಕಾಲ ತನಗಾಗಿ ಕಾದು ನಿಂತಿದ್ದನ್ನು ಪ್ರಸ್ತಾಪಿಸಿದ ಅವರು ಜನತೆಯ ‘15 ಗಂಟೆಗಳ ರೋಡ್ ಶೋ’ಗಾಗಿ ಅವರನ್ನು ಪ್ರಶಂಸಿಸಿದರು.

ನಾನು ವಾರಣಾಸಿಯ ಜನರಿಗೆ ಕೃತಜ್ಞನಾಗಿದ್ದೇನೆ. ಐದು ವರ್ಷಗಳ ಹಿಂದೆ ಮಾಡಿದ್ದಂತೆ ನಿನ್ನೆಯಿಂದಲೂ ಅವರು ನನ್ನನ್ನು ಆಶೀರ್ವದಿಸುತ್ತಿದ್ದಾರೆ. ಮೋದಿಯವರು ಈಗಾಗಲೇ ಗೆದ್ದಿದ್ದಾರೆ ಎಂಬ ಅಭಿಪ್ರಾಯವನ್ನು ಕೆಲವರು ಸೃಷ್ಟಿಸುತ್ತಿದ್ದಾರೆ. ಅವರನ್ನು ನಂಬಬೇಡಿ, ದಯವಿಟ್ಟು ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ಎಂದು ಅವರು ಹೇಳಿದರು.

ಮಾಧ್ಯಮಗಳಿಗೂ ಕೃತಜ್ಞತೆಗಳನ್ನು ಸಲ್ಲಿಸಿದ ಅವರು, ನಿನ್ನೆ ಮಧ್ಯಾಹ್ನದಿಂದಲೂ ಈ ಸುಡುಬಿಸಿಲಿನಲ್ಲಿ ನೀವು ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ. ನೀವು ನಿಮ್ಮ ಪರಿಶ್ರಮವನ್ನು ಮುಂದುವರಿಸಲು ಸಾಧ್ಯವಾಗುವಂತೆ ನಾನು ನಿಮಗೆ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ ಎಂದರು.

ನಾಮಪತ್ರ ಸಲ್ಲಿಕೆಗೆ ಎರಡು ದಿನಗಳ ಮೊದಲಿನ ಅವಧಿಯಲ್ಲಿ ಮೊದಿ ರೋಡ್ ಶೋ, ಗಂಗಾ ಆರತಿ ನಡೆಸಿದ್ದಲ್ಲದೆ ಎರಡು ಬಹಿರಂಗ ಸಭೆಗಳಲ್ಲಿಯೂ ಮಾತನಾಡಿದ್ದರು. ಶುಕ್ರವಾರ ಅವರು ನಾಮಪತ್ರ ಸಲ್ಲಿಸಿದಾಗ ಬಿಜೆಪಿಯ ಮಿತ್ರಪಕ್ಷಗಳ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News