ಲಂಕಾದಲ್ಲಿ ಇನ್ನಷ್ಟು ಸ್ಫೋಟಗಳ ಸಾಧ್ಯತೆ: ಬ್ರಿಟನ್, ಆಸ್ಟ್ರೇಲಿಯ ಎಚ್ಚರಿಕೆ
ಕೊಲಂಬೊ, ಎ. 26: ಶ್ರೀಲಂಕಾದಲ್ಲಿ ಭಯೋತ್ಪಾದಕರು ಇನ್ನಷ್ಟು ದಾಳಿಗಳನ್ನು ನಡೆಸುವ ಸಾಧ್ಯತೆಯಿದ್ದು, ಅನಿವಾರ್ಯವಲ್ಲದಿದ್ದರೆ ಆ ದೇಶಕ್ಕೆ ಪ್ರಯಾಣಿಸುವುದನ್ನು ತಡೆಯುವಂತೆ ಬ್ರಿಟನ್ ಮತ್ತು ಆಸ್ಟ್ರೇಲಿಯಗಳು ತಮ್ಮ ಪ್ರಜೆಗಳಿಗೆ ಸಲಹೆ ನೀಡಿವೆ.
ಮುಂದೆ ನಡೆಯುವ ಸಂಭಾವ್ಯ ದಾಳಿಗಳು, ಪ್ರವಾಸಿಗರು ಭೇಟಿ ನೀಡುವ ಸ್ಥಳಗಳು ಸೇರಿದಂತೆ ಯಾವುದೇ ಸ್ಥಳಗಳಲ್ಲಿ ನಡೆಯಬಹುದು ಎಂದು ಅವು ಎಚ್ಚರಿಸಿವೆ.
ಶ್ರೀಲಂಕಾದಲ್ಲಿ ಜನಸಂದಣಿ ಇರುವ ಸ್ಥಳಗಳಿಂದ ದೂರ ಇರುವಂತೆ ರವಿವಾರ ಸರಣಿ ಬಾಂಬ್ ಸ್ಫೋಟಗಳು ನಡೆದ ಬೆನ್ನಿಗೇ ಬ್ರಿಟನ್ ವಿದೇಶ ಕಚೇರಿಯು ತನ್ನ ನಾಗರಿಕರಿಗೆ ಸಲಹೆ ನೀಡಿತ್ತು. ಗುರುವಾರ ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂಬುದಾಗಿ ಎಚ್ಚರಿಸಿದೆ.
ಬ್ರಿಟನ್ ನೀಡಿದ ಎಚ್ಚರಿಕೆಯ ಬೆನ್ನಿಗೇ, ಶ್ರೀಲಂಕಾದಲ್ಲಿ ಇನ್ನಷ್ಟು ಸ್ಫೋಟಗಳು ನಡೆಯುವ ಸಾಧ್ಯತೆಯಿದೆ ಎಂಬುದಾಗಿ ಆಸ್ಟ್ರೇಲಿಯ ಮತ್ತು ಅಮೆರಿಕಗಳು ಎಚ್ಚರಿಸಿವೆ ಹಾಗೂ ಆ ದೇಶಕ್ಕೆ ಹೋಗುವುದನ್ನು ತಡೆಯುವಂತೆ ತಮ್ಮ ನಾಗರಿಕರಿಗೆ ಸಲಹೆ ನೀಡಿವೆ.