ಎ. 27ರಿಂದ ದೇರಳಕಟ್ಟೆಯಲ್ಲಿ ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ
ಮಂಗಳೂರು, ಎ. 26: ಅಮೇಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಹಾಗೂ ದ.ಕ. ಅಮೇಚೂರ್ ಕಬಡ್ಡಿ ಅಸೋಸಿಯೇಶನ್, ಕಾಸ್ಕ್ ನರಿಂಗಾನ, ಶಮ ಗೋಲ್ಡ್, ಸಹರಾ ಸ್ಪೋಟ್ಸ್ ಮತ್ತು ಶದಾ ಟ್ರೇಡರ್ಸ್ ದೇರಳಕಟ್ಟೆ ವತಿಯಿಂದ ಎ.27 ಮತ್ತು 28ರಂದು ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ ಆರ್ಮಿ ಟ್ರೋಫಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕಬಡ್ಡಿ ಆಟಗಾರ, ಪ್ರೊ ಕಬಡ್ಡಿ ತರಬೇತುದಾರ ಜಗದೀಶ್ ಕುಂಬ್ಳೆ, ಸಂಜೆ 4 ಗಂಟೆಯಿಂದ ಮಧ್ಯರಾತ್ರಿಯವರೆಗೆ ದೇರಳಕಟ್ಟೆಯ ಗ್ರೀನ್ ಮೈದಾನದಲ್ಲಿ ಈ ಪಂದ್ಯಾಟ ನಡೆಯಲಿದೆ ಎಂದರು.
ಟೂರ್ನಮೆಂಟ್‌ನಲ್ಲಿ ಇನ್ಕಮ್ ಟ್ಯಾಕ್ಸ್ ಡೆಲ್ಲಿ, ಒಎನ್‌ಜಿಸಿ ಗುಜರಾತ್, ಇಂಡಿಯನ್ ನೇವಿ, ಏರ್ ಇಂಡಿಯಾ ಮುಂಬೈ, ಇಂಡಿಯನ್ ಆರ್ಮಿ, ಮಹೀಂದ್ರ ಆ್ಯಂಡ್ ಮಹೀಂದ್ರ ಮಹಾರಾಷ್ಟ್ರ, ಇಂಡಿಯನ್ ರೈಲ್ವೇಸ್ ಮತ್ತು ಆಳ್ವಾಸ್ ಮೂಡುಬಿದಿರೆ ತಂಡಗಳು ಭಾಗವಹಿಸಲಿದ್ದು, ಪ್ರತಿಯೊಂದು ತಂಡದಲ್ಲಿಯೂ ಪ್ರೋ-ಕಬಡ್ಡಿ ಆಟಗಾರರು ಕೂಡ ಆಟವಾಡಲಿದ್ದಾರೆ ಎಂದು ತಿಳಿಸಿದರು.
ಮೊದಲನೇ ಸ್ಥಾನ ಪಡೆದ ತಂಡಕ್ಕೆ 2 ಲಕ್ಷ ರೂ. ಮತ್ತು ಟ್ರೋಫಿ, ಎರಡನೇ ಸ್ಥಾನ ಪಡೆದ ತಂಡಕ್ಕೆ 1.50 ಲಕ್ಷ ರೂ., ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ತಲಾ 1 ಲಕ್ಷ ರೂ. ಬಹುಮಾನ, ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ರಥನ್ ಶೆಟ್ಟಿ ಮಾತನಾಡಿ, ಎ.27ರಂದು ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶದಾ ಟ್ರೇಡರ್ಸ್‌ನ ಅಶ್ರಫ್ ಮಲಾರ್, ಕಾಸ್ಕ್ ನರಿಂಗಾನದ ಪ್ರಧಾನ ಕಾರ್ಯದರ್ಶಿ ನವಾಝ್ ಎಂ.ಬಿ. ಹಾಗು ಇತರರು ಉಪಸ್ಥಿತರಿದ್ದರು.