ಆ್ಯಗ್ನೆಸ್ ವಿದ್ಯಾಸಂಸ್ಥೆಯಿಂದ ಸಂವಿಧಾನ ವಿರೋಧಿ ನಡೆ ಆರೋಪ: ಸಿಎಫ್ಐ ಯಿಂದ ಹೋರಾಟದ ಎಚ್ಚರಿಕೆ
ಮಂಗಳೂರು, ಎ. 26: ನಗರದ ಸಂತ ಆ್ಯಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಗೆ ಸ್ಕಾರ್ಪ್ ಧರಿಸುವ ಕಾರಣಕ್ಕಾಗಿ ದ್ವಿತೀಯ ಪಿಯುಸಿ ದಾಖಲಾತಿ ನಿರಾಕರಿಸಿರುವ ಕ್ರಮವು ದೇಶದ ಸಂವಿಧಾನದ ವೈಯಕ್ತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯು ಆರೋಪಿಸಿದೆ.
ಯಾವುದೇ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಗಳು ತಮ್ಮದೇ ನೀತಿ ನಿಯಮಗಳನ್ನು ರೂಪಿಸುವುದು ಅವರ ಕರ್ತವ್ಯ ಎನ್ನುವುದು ನಿಜವಾದರೂ ಕೂಡ ಆ ರೀತಿ ನಿಯಮಗಳು ಒಬ್ಬ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಾದರೆ ಅಂತಹ ಸಂಸ್ಥೆಗಳು ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿರಬೇಕಾಗಿದೆ. ಆ್ಯಗ್ನೆಸ್ ಕಾಲೇಜು ಕೂಡಾ ವಿದ್ಯಾರ್ಥಿನಿಯ ವೈಯಕ್ತಿಕ ಹಕ್ಕನ್ನು ಗೌರವಿಸಿ ಸಂವಿಧಾನದ ಮೌಲ್ಯವನ್ನು ಎತ್ತಿಹಿಡಿಯಬೇಕಾಗಿತ್ತು. ಆದರೆ ಸಂಸ್ಥೆಯು ಪೂರ್ವಾಗ್ರಹ ಪೀಡಿತರಂತೆ ವರ್ತಿಸುತ್ತಾ ಸಮಾಜದಲ್ಲಿ ಮುಸ್ಲಿಮರ ಭಾವನೆಗಳನ್ನು ಗೌರವಿಸದಿರುವ ಹಠಮಾರಿ ಧೋರಣೆಯು ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದು ಸ್ಪಷ್ಟವಾಗಿದೆ. ಹಾಗಾಗಿ ಸಿಎಫ್‌ಐ ವಿದ್ಯಾರ್ಥಿನಿಯ ಪರವಾಗಿ ನಿಲ್ಲಲಿದೆ ಎಂದು ತಿಳಿಸಿದೆ.
ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಕೂಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗು ಆಡಳಿತ ವ್ಯವಸ್ಥೆ ಮೌನವಾಗಿರುವುದು ಖಂಡನೀಯ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಇಂತಹ ಸಮಸ್ಯೆಗಳು ತಲೆ ಎತ್ತುತ್ತಿರುವುದು ಸಮಾಜದಲ್ಲಿ ಸೌಹಾರ್ದತೆಯನ್ನು ಕೆಡಿಸುತ್ತಿದೆ. ಹಾಗಾಗಿ ಸರಕಾರ ಇದನ್ನು ಗಂಭೀರ ವಾಗಿ ಪರಿಗಣಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಎಲ್ಲಾ ರೀತಿಯ ಹೋರಾಟಗಳಿಗೆ ಸಿಎಫ್‌ಐ ಕಟಿಬದ್ಧವಾಗಿದೆ ಎಂದು ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.