ಸಿಬಿಐನಿಂದ ಮಾಯಾವತಿ ಅವಧಿಯ ಅವ್ಯವಹಾರ ತನಿಖೆ

Update: 2019-04-27 03:49 GMT

ಲಕ್ನೋ, ಎ.27: ಬಿಎಸ್ಪಿ ನಾಯಕಿ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ 21 ಸಕ್ಕರೆ ಕಾರ್ಖಾನೆಗಳ ಬಂಡವಾಳ ಹಿಂದೆಗೆದ ಕಾರಣದಿಂದ ರಾಜ್ಯ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ ಎಂಬ ಆರೋಪದ ಬಗ್ಗೆ ತನಿಖೆಗೆ ಮುಂದಾಗಿರುವ ಸಿಬಿಐ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ. ಅಲ್ಲದೆ ಆರು ಪ್ರಾಥಮಿಕ ತನಿಖೆಗಳನ್ನು ನಡೆಸಲು ಆದೇಶಿಸಿದೆ.
2010-11ರ ಅವಧಿಯಲ್ಲಿ ಕೈಗೊಂಡ ಈ ನಿರ್ಧಾರದಿಂದಾಗಿ ರಾಜ್ಯ ಬೊಕ್ಕಸಕ್ಕೆ 1179 ಕೋಟಿ ರೂಪಾಯಿ ನಷ್ಟವಾಗಿದೆ ಎಂದು 2013ರ ಸಿಎಜಿ ವರದಿ ಉಲ್ಲೇಖಿಸಿದ್ದನ್ನು ಆಧರಿಸಿ ಈ ಕ್ರಮಕ್ಕೆ ಸಿಬಿಐ ಮುಂದಾಗಿದೆ.
ಉತ್ತರ ಪ್ರದೇಶ ಸರ್ಕಾರದ ಯಾವ ಅಧಿಕಾರಿ ಅಥವಾ ರಾಜಕಾರಣಿಗಳನ್ನು ಎಫ್‌ಐಆರ್‌ನಲ್ಲಿ ಅಥವಾ ಪ್ರಾಥಮಿಕ ತನಿಖಾ ಆದೇಶದಲ್ಲಿ ಹೆಸರಿಸಿಲ್ಲವಾದರೂ, ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉತ್ತರ ಪ್ರದೇಶ ರಾಜ್ಯ ಸರ್ಕಾರಿ ಸಕ್ಕರೆ ನಿಗಮ ನಿಯಮಿತ ಅಧೀನದ ಸಕ್ಕರೆ ಕಾರ್ಖಾನೆಗಳಿಂದ ಖರೀದಿಸುವ ವೇಳೆ ಇವರು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆಪಾದಿಸಲಾಗಿದೆ. ಕಂಪೆನಿಗಳ ಕಾಯ್ದೆ 629 (ಎ) ಅನ್ವಯ ನಕಲಿ ದಾಖಲೆ ಹಾಗೂ ವಂಚನೆ ಪ್ರಕರಣ ದಾಖಲಿಸಲಾಗಿದೆ.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಮಾಡಿಕೊಂಡಿರುವ ಬೆನ್ನಲ್ಲೇ ಸಿಬಿಐ ಕೈಗೊಂಡಿರುವ ಕ್ರಮ ಚರ್ಚೆಗೆ ಗ್ರಾಸವಾಗಿದೆ. ತನಿಖೆಗೆ ನೀಡಿರುವ ಆದೇಶ, ಬಿಜೆಪಿ ಸರ್ಕಾರ ಕೇಂದ್ರೀಯ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಾಚಲ ರಾಜಭಾರ್ ಹೇಳಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಕ್ಕರೆ ಕಾರ್ಖಾನೆಗಳನ್ನು ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು 2013ರ ಸಿಎಜಿ ವರದಿ ಆಪಾದಿಸುವುದರೊಂದಿಗೆ ವಿವಾದ ಹುಟ್ಟಿಕೊಂಡಿತ್ತು. 2018ರ ಎಪ್ರಿಲ್ 12ರಂದು ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರ, ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರುವ ಸಂಬಂಧ ಅಧಿಸೂಚನೆ ಹೊರಡಿಸಿತ್ತು.
ಹಿಂದೆ ಮಾಯಾವತಿಯವರ ಆಪ್ತರಾಗಿದ್ದ ನಸೀಮುದ್ದೀನ್ ಸಿದ್ದೀಕಿ 2017ರಲ್ಲಿ ಈ ಸಂಬಂಧ ಹೇಳಿಕೆ ನೀಡಿ, ಅಂದಿನ ಮುಖ್ಯಮಂತ್ರಿ ಮಾಯಾವತಿ ಹಾಗೂ ಪ್ರಧಾನ ಕಾರ್ಯದರ್ಶಿ ಸತೀಶ್‌ಚಂದ್ರ ಮಿಶ್ರಾ ಅವರ ಸೂಚನೆಗೆ ಅನುಗುಣವಾಗಿ ಸಕ್ಕರೆ ಕಾರ್ಖಾನೆಗಳನ್ನು ಮಾರಾಟ ಮಾಡಲಾಗಿತ್ತು ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಪ್ರತಿಯಾಗಿ, ಮಾರಾಟದಲ್ಲಿ ನಡೆದ ಅವ್ಯವಹಾರಗಳಿಗೆ ಸಿದ್ದೀಕಿ ಅವರೇ ಹೊಣೆ ಎಂದು ಮಾಯಾವತಿ ಪ್ರತ್ಯಾರೋಪ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News