ಇಸ್ರೋ ಸಾಧನೆಗೆ ವಿಜ್ಞಾನಿಗಳ ಕಾರ್ಯತತ್ಪರತೆಯೇ ಕಾರಣ

Update: 2019-04-27 11:27 GMT

ಶಿರ್ವ, ಎ.27: ಇಂದು ವಿಶ್ವದ ಕೇವಲ ಆರು ರಾಷ್ಟ್ರಗಳು ಮಾತ್ರ ಸಮಗ್ರ ಬಾಹ್ಯಾಕಾಶ ಕಾರ್ಯಕ್ರಮವನ್ನು ಆಯೋಜಿಸುವ ಸಾಮರ್ಥ್ಯ ಹೊಂದಿದ್ದು ಅದರಲ್ಲಿ ಭಾರತವೂ ಒಂದಾಗಿದೆ. ಇಂತಹ ಸಾಧನೆಗೆ ಇಸ್ರೋ ವಿಜ್ಞಾನಿಗಳ ಕಾರ್ಯತತ್ಪರತೆ, ಬದ್ಧತೆಗಳೇ ಕಾರಣ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವೈಜ್ಞಾನಿಕ ಕಾರ್ಯದರ್ಶಿ ಡಾ.ಪಿ.ಜಿ.ದಿವಾಕರ್ ಹೇಳಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾದ ‘ಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು’ ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ‘ಎನ್‌ಸಿಇಟಿಎಸ್‌ಇ-2019’ನ್ನು ಎ.26ರಂದು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಸ್ರೋ ಸಂಸ್ಥೆಯು ಕೇವಲ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಮಾತ್ರ ಆಯೋಜನೆ ಮಾಡದೆ, ವಿವಿಧ ತಂತ್ರಜ್ಞಾನಗಳ ಮೂಲಕ ಜನಸಾಮಾನ್ಯರ ಜೀವನವನ್ನು ಉತ್ತಪಡಿಸಲು ಹಲವಾರು ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದರು.

ಪ್ರಪಂಚದಾದ್ಯಂತ ಅನೇಕ ಜನರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದು, ತಂತ್ರಜ್ಞಾನ ಮತ್ತು ಅದನ್ನು ಉಪಯೋಗಿ ಸುವ ಮಾಧ್ಯಮಗಳು ಪ್ರತಿದಿನವೂ ಬದಲಾವಣೆಯನ್ನು ಹೊಂದುತ್ತವೆ. ನಾವು ಈ ಬದಲಾವಣೆಗಳ ಬಗ್ಗೆ ಅರಿತುಕೊಳ್ಳದೇ ಇದ್ದಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದೇವೆ ಎಂದು ಅವರು ಹೇಳಿದರು.

ಉಡುಪಿಯ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಕಾರ್ಯ ದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಡಾ.ವಾಸುದೇವ ಸ್ವಾಗತಿಸಿದರು. ಸಿವಿಲ್ ವಿಭಾಗದ ಸಹ ಪ್ರಾಧ್ಯಾಪಕ ಸುಜಯ್ ರಾಘವೇಂದ್ರ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಆನಂದ್ ವಿ.ಆರ್. ವಂದಿಸಿದರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸೌಮ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News