×
Ad

ಬೀಡಿ ಕಾರ್ಮಿಕರಿಗೆ 6000ರೂ. ಮಾಸಿಕ ಪಿಂಚಣಿ ನೀಡಲು ಒತ್ತಾಯ

Update: 2019-04-27 18:22 IST

ಉಡುಪಿ, ಎ.27: ಪ್ರಸ್ತುತ ಭವಿಷ್ಯನಿಧಿ ಪಿಂಚಣಿ ಯೋಜನೆಯಲ್ಲಿ ಬೀಡಿ ಕಾರ್ಮಿಕರಿಗೆ 1,000ರೂ. ಮಾಸಿಕ ಪಿಂಚಣಿ ಲಭಿಸುತ್ತಿದ್ದು, ಬೆಲೆ ಏರಿಕೆಯಿಂದ ತತ್ತರಿಸಿರುವ ಕಾರ್ಮಿಕರಿಗೆ ಇದು ಒಂದು ಹೊತ್ತಿನ ಊಟಕ್ಕೂ ಸಾಲದಿರುವುದರಿಂದ ಅವರ ಮಾಸಿಕ ಪಿಂಚಣಿಯನ್ನು 6,000ರೂ.ಗೆ ಏರಿಕೆ ಮಾಡಿ ಜಾರಿಗೊಳಿಸುವಂತೆ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್‌ನ 74ನೇ ವಾರ್ಷಿಕ ಮಹಾಸಭೆ ಕೇಂದ್ರ ಸಕಾರವನ್ನು ಒತ್ತಾಯಿಸಿದೆ.

ಉಡುಪಿ ಹಿಂದಿ ಪ್ರಚಾರ ಸಮಿತಿ ಸಭಾಭವನದಲ್ಲಿ ಸಂಘದ ಅಧ್ಯಕ್ಷೆ ಶಾಂತ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಪಿಂಚಣಿ ಪರಿಷ್ಕರಣೆ, ಕನಿಷ್ಟ ಕೂಲಿ ರೂಪಾಯಿ 210ರೂ. ಜಾರಿ, ಬಾಕಿ ತುಟ್ಟಿಭತ್ಯೆ ರೂ. 12.75 ಪಾವತಿಗೆ ಒತ್ತಾಯ, ಕೋಟ್ಪಾ ಮತ್ತು ತಂಬಾಕು ನಿಷೇಧ ಕಾಯಿದೆ ಹಿಂತೆಗೆಯಲು ಒತ್ತಾಯ, ಬೀಡಿ ವೆಲ್ಫೇರ್ ಪಂಡ್ ಸೌಲಭ್ಯ ಸಮರ್ಪಕ ಜಾರಿಗೆ ಸರಕಾರವನ್ನು ಒತ್ತಾಯಿಸುವ ಹಲವು ಬೇಡಿಕೆಗಳನ್ನು ಸವಾರ್ನುಮತದಿಂದ ಅಂಗೀಕರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತ ಕಮ್ಯುನಿಷ್ಟ್ ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿ, ಪ್ರಸ್ತುತ ಕೇಂದ್ರ ಸರಕಾರ ಕೋಟ್ಪಾ ಕಾಯಿದೆ ಮತ್ತು ತಂಬಾಕು ನಿಷೇದ ಕಾಯ್ದೆ ಜಾರಿಗೆ ತಂದಿರುವ ಪರಿಣಾಮ ಉಭಯ ಜಿಲ್ಲೆಗಳ ಜೀವನಾಡಿಯಂತಿರುವ ಬೀಡಿ ಉದ್ಯಮ ನಶಿಸುವ ಅಂಚಿನಲ್ಲಿದೆ. ಒಂದೆಡೆ ಸರಕಾರ ಈ ಉದ್ಯಮದಿಂದ ಸಾಕಷ್ಟು ತೆರಿಗೆ ಸಂಗ್ರಹಿಸುತ್ತಿದ್ದರೂ, ಕಾರ್ಮಿಕರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ. ಬದಲಾಗಿ ಕೈಗಾರಿಕೆಗೆ ಮಾರಕವಾದ ಕಾನೂನು ತಂದು ಕೈಗಾರಿಕೆಯನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ ಎಂದು ಆರೋಪಿಸಿದರು.

ಬೀಡಿ ಕಾರ್ಮಿಕರಿಗೆ ಸಿಗುತ್ತಿರುವ ಕಾನೂನುಬದ್ಧ ಸವಲತ್ತುಗಳನ್ನು ವಂಚಿಸಲು ಸರಕಾರ ಮತ್ತು ಇಲಾಖೆ ಮಾಲಕರಿಗೆ ಸಹಾಯ ಮಾಡುತ್ತಿವೆ. ಸರಕಾರವೇ ರಚಿಸಿದ ಸಮಿತಿಯಲ್ಲಿ ಮಾಲಕರು ಸ್ವತಃ ಒಪ್ಪಿಕೊಂಡು ಮಂಜೂರು ಮಾಡಿರುವ ಮಜೂರಿಯನ್ನು ಜಾರಿಗೊಳಿಸದೇ ಕಾರ್ಮಿಕರಿಗೆ ವಂಚಿಸುವ ಹುನ್ನಾರ ಮುಂದುವರಿದಿರುವುದು ದುರದೃಷ್ಟಕರ ಎಂದು ಟೀಕಿಸಿದರು.

ಎಸ್.ಕೆ. ಬೀಡಿ ವರ್ಕರ್ಸ್‌ ಫೆಡರೇಶನ್ (ಎಐಟಿಯುಸಿ)ನ ಪ್ರಧಾನ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ ಮಾತನಾಡಿ ಭವಿಷ್ಯನಿಧಿ ಇಲಾಖೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಕಡ್ಡಾಯಗೊಳಿಸಿರುವುದರಿಂದ ಅವಿದ್ಯಾವಂತ ಬಡ ಕಾರ್ಮಿಕರು ತಾನು ಕಷ್ಟಪಟ್ಟು ದುಡಿದು, ಹಣವನ್ನು ಭವಿಷ್ಯನಿಧಿಯಲ್ಲಿ ಕೂಡಿಟ್ಟು, ಅದನ್ನು ತನಗೆ ಬೇಕಾದಾಗ ವಾಪಾಸು ಪಡೆಯಲು ಪರದಾಡುವ ಪರಿಸ್ಥಿತಿ ಇದೆ. ಈ ಸಮಸ್ಯೆ ಬಗೆಹರಿಸಿ, ಕಾರ್ಮಿಕರ ಕಷ್ಟವನ್ನು ದೂರ ಮಾಡಲು, ಭವಿಷ್ಯನಿಧಿ ಇಲಾಖೆ ಮತ್ತು ಕೇಂದ್ರ ಸರಕಾರ ತಕ್ಷಣ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದರು.

ಪಾಣೆಮಂಗಳೂರು ಫಿರ್ಕಾ ಬೀಡಿ ಮತ್ತುಜನರಲ್ ವರ್ಕರ್ಸ್‌ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಅಧ್ಯಕ್ಷೆ ಸರಸ್ವತಿ ಕಡೇಶ್ವಾಲ್ಯ, ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಕೋರೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ, ಎಐಟಿಯುಸಿ ನಾಯಕರಾದ ಬಿ. ಶೇಖರ್, ಸಂಜೀವ ಶೇರಿಗಾರ್, ಸೋಮಪ್ಪಜತ್ತನ್ನ, ಆನಂದ ಪೂಜಾರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಶಶಿಕಲ ಗಿರೀಶ್ ಸಂಘದ ವರದಿ ಮಂಡಿಸಿದರು. ಗತವರ್ಷದ ಲೆಕ್ಕಪತ್ರವನ್ನು ಕೋಶಾಧಿಕಾರಿ ಕೆ.ವಿ. ಭಟ್ ಮಂಡಿಸಿದರು. ವರದಿ ಮತ್ತು ಲೆಕ್ಕಪತ್ರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಸರ್ವಾನುಮತದಿಂದ ಅಂಗೀಕರಿಸಿತು. ಖಜಾಂಚಿ ಕೆ.ವಿ. ಭಟ್ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

ಸಂಘಕ್ಕೆ ಆಯ್ಕೆ: ಸಭೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಸುಮಾರು 54 ಜನರಿರುವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಶಾಂತ ನಾಯಕ್ ಅಧ್ಯಕ್ಷರು, ಸುಮತಿ ಶೆಟ್ಟಿ, ಆನಂದ ಪೂಜಾರಿ, ಅಪ್ಪಿಶೇರಿಗಾರ್ತಿ ಉಪಾಧ್ಯಕ್ಷರು, ಶಶಿಕಲ ಗಿರೀಶ್ ಪ್ರಧಾನ ಕಾರ್ಯದರ್ಶಿ,ಸಂಜೀವ ಶೆಟ್ಟಿಗಾರ್, ವಾರಿಜ ನಾಯ್ಕಿ ಆತ್ರಾಡಿ, ಸುಚಿತ್ರ ಸಹ ಕಾರ್ಯದರ್ಶಿ ಹಾಗೂ ಕೆ.ವಿ.ಭಟ್ ಕೋಶಾಧಿಕಾರಿಯಾಗಿ ಆಯ್ಕೆಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News