ಉಡುಪಿ: ಪೇಜಾವರ ಸ್ವಾಮೀಜಿಯ 88ನೆ ಜನ್ಮದಿನ ಆಚರಣೆ
ಉಡುಪಿ, ಎ.27: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರ 88ನೆ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಛಾಯಾಗ್ರಾಹಕ ಅಸ್ಟ್ರೋ ಮೋಹನ್ ಅವರ ಪೇಜಾವರ ಸ್ವಾಮೀಜಿ ಕುರಿತ ಎ ಡೇ ವಿತ್ ಸೈಂಟ್ ‘ದೆನ್ ಆ್ಯಂಡ್ ನೌ’ ಎಂಬ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕ್ಯಾಲೆಂಡರ್ ಪ್ರಕಾರದ ಜನ್ಮದಿನವನ್ನು ಪರ್ಯಾಯ ಸ್ವಾಮೀಜಿಯ ಜೊತೆಗೂಡಿ ಗಣ್ಯರೆಲ್ಲರು ಆಚರಿಸಿದರು.
ಪೇಜಾವರ ಸ್ವಾಮೀಜಿಯನ್ನು ಕಮಲದ ಪಲ್ಲಕ್ಕಿಯಲ್ಲಿ ಕೂರಿಸಿ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಸಹಿತ ಮುಖ್ಯ ಅತಿಥಿಗಳಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಡಾ.ಸಂದ್ಯಾ ಪೈ, ಡಾ.ಎಚ್.ಎಸ್.ಬಲ್ಲಾಳ್, ಡಾ.ಎಂ. ಮೋಹನ್ ಆಳ್ವ, ವಿನೋದ್ ಕುಮಾರ್ ಹೂವುಗಳನ್ನು ಸುರಿಯುವ ಮೂಲಕ ಪುಷ್ಪಾರ್ಚಣೆ ಮಾಡಲಾಯಿತು.
ಬಳಿಕ ಮಾತನಾಡಿದ ಸ್ವಾಮೀಜಿ, ಈ ಸಾಂಕೇತಿಕ ಕಮಲಕ್ಕಿಂತ ಎಲ್ಲರ ಹೃದಯ ಕಮಲದಲ್ಲಿ ನನಗೆ ನಿರಂತರ ಸ್ಥಾನವನ್ನು ಭಗವಂತ ಒದಗಿಸಿಕೊಡಲಿ. ಅದರಂತೆ ಭಗವಂತನ ಪಾದ ಕಮಲದಲ್ಲಿ ಅನುಗ್ರಹ ಪುಷ್ಪ ಅರ್ಪಣೆ ನಿರಂತರ ನಡೆಯಲಿ ಎಂಬುದಾಗಿ ಎಲ್ಲರು ಭಗವಂತರಲ್ಲಿ ಪಾರ್ಥನೆ ಮಾಡಬೇಕು ಎಂದು ಹೇಳಿದರು.