ನನ್ನಲ್ಲಿರುವ ಕೊರತೆ, ದೌರ್ಬಲ್ಯ ನನಗೆ ಮಾತ್ರ ಗೊತ್ತು: ಪೇಜಾವರ ಶ್ರೀ

Update: 2019-04-27 16:49 GMT

ಉಡುಪಿ, ಎ.27: ‘ನನ್ನಲ್ಲಿರುವ ಕೊರತೆ, ದೌರ್ಬಲ್ಯ ಏನು ಎಂಬುದು ನನಗೆ ಗೊತ್ತು. ಅದು ಬೇರೆ ಯಾರಿಗೂ ಗೊತ್ತಿಲ್ಲ. ಗೊತ್ತಿಲ್ಲದ ಎಷ್ಟೋ ಸಂಗತಿ ನನ್ನಲ್ಲಿ ಇದೆ. ಇದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ’ ಎಂದು ಪೇಜಾವರ ಹಿರಿಯ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಭೂತರಾಜ ಪ್ರಕಾಶನದ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ಛಾಯಾಗ್ರಾಹಕ ಅಸ್ಟ್ರೋ ಮೋಹನ್ ಅವರ ಪೇಜಾವರ ಸ್ವಾಮೀಜಿ ಕುರಿತ ‘ಎ ಡೇ ವಿತ್ ಸೈಂಟ್ ‘ದೆನ್ ಆ್ಯಂಡ್ ನೌ’ ಎಂಬ ಛಾಯಾಚಿತ್ರ ಸಂಪುಟದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಒಬ್ಬ ವ್ಯಕ್ತಿಯಲ್ಲಿ, ಜನರು ಅವನನ್ನು ನೋಡುವ, ತಾನು ತನ್ನನ್ನು ನೋಡುವ ಹಾಗೂ ನಿಜವಾದ ಎಂಬ ಮೂರು ವಿಧದ ವ್ಯಕ್ತಿತ್ವಗಳಿರುತ್ತದೆ. ಇದರಲ್ಲಿ ನಮ್ಮಲ್ಲಿ ಯಾವುದು ಇದೆ ಯಾವುದು ಇಲ್ಲ ಎಂಬುದು ಅರಿತು ಕೊಳ್ಳುವುದೇ ಕಷ್ಟ. ಹೀಗೆ ನನ್ನನ್ನು ನಾನೇ ಕಾಣಬೇಕಾಗಿದೆ ಎಂದು ಅವರು ತಿಳಿಸಿದರು.

ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಸ್ವಾಮೀಜಿ ಗುರುತಿಸಿಕೊಂಡಿರುವ ತನ್ನಲ್ಲಿರುವ ವ್ಯಕ್ತಿತ್ವಕ್ಕಿಂತ ಸಮಾಜ ಅವರನ್ನು ಗುರುತಿಸಿಕೊಂಡಿದೆ. ಅದಕ್ಕೂ ಮೇರು ವ್ಯಕ್ತಿತ್ವವೇ ಸ್ವಾಮೀಜಿಯ ವಾಸ್ತವ ವ್ಯಕ್ತಿತ್ವ. ಸ್ವಾಮೀಜಿಯ ಶರೀರದಲ್ಲಿ ಮಾತ್ರ ದೌರ್ಬಲ್ಯ ಇದೆಯೇ ಹೊರತು ಬೇರೆ ಎಲ್ಲೂ ಇಲ್ಲ. ಅದುವೇ ಅವರ ಪ್ರಾಬಲ್ಯ ಎಂದರು.

ಕೃತಿಯನ್ನು ಬಿಡುಗಡೆಗೊಳಿಸಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಪೇಜಾವರ ಸ್ವಾಮೀಜಿಯಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ವೈಯಕ್ತಿಕ ಎಂಬ ಮೂರು ಮುಖಗಳಿವೆ. ಚಿತ್ರವನ್ನು ಕೇವಲ ನೋಡದೆ ಧ್ಯಾನಿಸಬೇಕು. ಇದರಿಂದ ಆ ಚಿತ್ರ ಹೃದಯದಲ್ಲಿ ಸ್ಥಾಪಿತವಾಗುತ್ತದೆ ಮತ್ತು ಮನಸ್ಸನ್ನು ಮುಟ್ಟುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ತರಂಗ ವಾರಪತ್ರಿಕೆಯ ಆಡಳಿತ ಸಂಪಾದಕಿ ಡಾ. ಸಂಧ್ಯಾ ಪೈ, ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್, ಮೂಡಬಿದ್ರೆ ಆಳ್ವಾಸ್ನ ಅಧ್ಯಕ್ಷ ಡಾ.ಮೋಹನ್ ಆಳ್ವ, ಮಣಿಪಾಲ ಮೀಡಿಯಾ ನೆಟವರ್ಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್, ಪ್ರಕಾಶಕಿ ಪ್ರವೀಣ ಮೋಹನ್ ಉಪಸ್ಥಿತರಿದ್ದರು.

ಅಸ್ಟ್ರೋ ಮೋಹನ್ ಸ್ವಾಗತಿಸಿದರು. ಜನಾರ್ದನ ಕೊಡವೂರು ವಂದಿಸಿದರು. ವಾಸುದೇ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News