ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ !

Update: 2019-04-27 17:28 GMT

ಹೊಸದಿಲ್ಲಿ,ಎ.27: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪದೇ ಪದೇ ಉಲ್ಲಂಘಿಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನ್ಯಾಯಾಲಯಗಳ ಮೆಟ್ಟಲೇರುವುದಾಗಿ ಕಾಂಗ್ರೆಸ್ ಪಕ್ಷವು ಶನಿವಾರ ತಿಳಿಸಿದೆ.

‘‘ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಮೋದಿ ಹಾಗೂ ಶಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನ್ಯಾಯಾಲಯಕ್ಕೆ ತೆರಳಲು ನಮಗೆ ಹಕ್ಕಿದೆ. ಈ ಆವಕಾಶವನ್ನು ನಾವು ಬಳಸಿಕೊಳ್ಳುತ್ತೇವೆ’’ ಎಂದು ಅಭಿಷೇಕ್ ಮನು ಸಿಂಘ್ವಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮೋದಿ ಹಾಗೂ ಶಾ ಅವರಿಂದ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆಯೆಂದು ಅವರು ಆರೋಪಿಸಿದರು. ‘ಚುನಾವಣಾ ಆಯೋಗ’ವೆಂಬುದು ‘ಚುನಾವಣಾ ಪ್ರಮಾದ’ವಾಗಿ ಬಿಟ್ಟಿದೆ ಎಂದು ಸಿಂಘ್ವಿ ವ್ಯಂಗ್ಯವಾಡಿದರು. ಮೋದಿ ಹಾಗೂ ಶಾ ಅವರು ಚುನಾವಣಾ ನೀತಿ ಸಂಹಿತೆಯ ವ್ಯಾಪ್ತಿಯಿಂದ ಹೊರಗಿದ್ದಾರೆಯೇ ಎಂದವರು ಅಚ್ಚರಿಪಟ್ಟರು. ಚುನಾವಣಾ ನೀತಿಸಂಹಿತೆಯೀಗ ‘ ಮೋದಿ ನೀತಿ ಸಂಹಿತೆ’ಯಾಗಿ ಬಿಟ್ಟಿದೆ ಎಂದವರು ಕಟಕಿಯಾಡಿದರು.

ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗೆ ಸಂಬಂಧಿಸಿ ನಾವು ನೀಡಿದ ದೂರನ್ನು ಆಧರಿಸಿ ಚುನಾವಣಾ ಆಯೋಗವು ಹಲವಾರು ನಾಯಕರ ವಿರುದ್ಧ ಕ್ರಮಗಳನ್ನು ಕೈಗೊಂಡಿದೆ. ಆದರೆ ಮೋದಿ ಹಾಗೂ ಶಾ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News