‘ಮೋದಿ ಶಿವಲಿಂಗದ ಮೇಲಿನ ಚೇಳು’ ಹೇಳಿಕೆ: ತರೂರ್‌ಗೆ ಕೋರ್ಟ್ ಸಮನ್ಸ್

Update: 2019-04-27 18:01 GMT

ಹೊಸದಿಲ್ಲಿ, ಎ. 27: ಆರೆಸ್ಸೆಸ್ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಶಿವಲಿಂಗದ ಮೇಲಿನ ಚೇಳಿಗೆ’ ಹೋಲಿಸಿದ್ದಾರೆಂಬ ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ಶಶಿ ಥರೂರ್ ವಿರುದ್ಧ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯವು ಶನಿವಾರ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ಶಶಿಥರೂರ್ ವಿರುದ್ಧ ದಿಲ್ಲಿ ಬಿಜೆಪಿ ನಾಯಕ ರಾಜೀವ್ ಬಬ್ಬರ್ ಸಲ್ಲಿಸಿರುವ ಕ್ರಿಮಿನಲ್ ಮಾನಹಾನಿ ದೂರಿನ ವಿಚಾರಣೆ ನಡೆಸಿದ ದಿಲ್ಲಿಯ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು, ಶಶಿಥರೂರ್‌ಗೆ ಸಮನ್ಸ್ ಜಾರಿಗೊಳಿಸಿದರು. ಕಾಂಗ್ರೆಸ್ ನಾಯಕನ ಹೇಳಿಕೆಯು ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆಯೆಂದು ರಾಜೀವ್ ಬಬ್ಬರ್ ದೂರಿನಲ್ಲಿ ಆರೋಪಿಸಿದ್ದರು.

‘‘ನಾನು ಶಿವನ ಭಕ್ತ. ಆದಾಗ್ಯೂ ಆರೋಪಿ (ಶಶಿಥರೂರ್) ಅವರು ಕೋಟ್ಯಂತರ ಶಿವಭಕ್ತರ ಭಾವನೆಗಳನ್ನು ಅಪಮಾನಿಸಿದ್ದಾರೆ. ಆರೋಪಿಯ ಹೇಳಿಕೆಯು ಭಾರತ ಹಾಗೂ ಹೊರದೇಶಗಳಲ್ಲಿರುವ ಶಿವಭಕ್ತರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ’’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭಾರತೀಯ ದಂಡಸಂಹಿತೆಯ 499 ಹಾಗೂ 500 ಸೆಕ್ಷನ್‌ಗಳಡಿ ಈ ದೂರನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News