ಅಗ್ಗದ ಜೀವರಕ್ಷಕ ಔಷಧಗಳ ಮೇಲೆ ಅಮೆರಿಕ ದಾಳಿ: ಭಾರತ ತೀಕ್ಷ್ಣ ಪ್ರತಿಕ್ರಿಯೆ

Update: 2019-04-28 03:49 GMT

ಹೊಸದಿಲ್ಲಿ, ಎ.28: ಭಾರತ, ಇಡೀ ವಿಶ್ವಕ್ಕೆ ನಕಲಿ ಔಷಧಿಗಳನ್ನು ಪೂರೈಸುವ ಪ್ರಮುಖ ಮೂಲ ಎಂದು ಅಮೆರಿಕದ ವರದಿ ಆಪಾದಿಸಿರುವುದನ್ನು ಭಾರತ ಕಟುವಾಗಿ ಟೀಕಿಸಿದೆ. ಆರೋಗ್ಯಸೇವೆಯನ್ನು ಎಲ್ಲರ ಕೈಗೆಟುಕುವಂತೆ ಮಾಡುವಲ್ಲಿ ಕಡಿಮೆ ವೆಚ್ಚದ ಜೀವರಕ್ಷಕ ಔಷಧಗಳು ಪ್ರಮುಖವಾಗುತ್ತವೆ ಎಂದು ಭಾರತ ಸಮರ್ಥಿಸಿಕೊಂಡಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿಗಳ "ಸ್ಪೆಷಲ್ 301 ರಿಪೋರ್ಟ್"ನಲ್ಲಿ ಜಾಗತಿಕವಾಗಿ ಸರಬರಾಜು ಆಗುವ ನಕಲಿ ಔಷಧಿಗಳ ಮೂಲಕ ಭಾರತ ಹಾಗೂ ಚೀನಾ ಎಂದು ಆಪಾದಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಶೇಕಡ 20ರಷ್ಟು ಔಷಧಿಗಳು ನಕಲಿ ಎಂದು ವರದಿ ಹೇಳಿತ್ತು.

"ಅಮೆರಿಕ ವ್ಯಾಪಾರ ಪ್ರತಿನಿಧಿಗಳ ವರದಿಯನ್ನು ನಾವು ಬಲವಾಗಿ ಅಲ್ಲಗಳೆಯುತ್ತೇವೆ. ಈ ಹೇಳಿಕೆಗೆ ಆಧಾರ ಮತ್ತು ಯಾವ ವಿಧಾನವನ್ನು ಅನುಸರಿಸಿ ಅಧ್ಯಯನ ಮಾಡಲಾಗಿದೆ ಎನ್ನುವುದು ತಿಳಿಯದು. ಬದಲಾಗಿ ನಾವು ಇದನ್ನು ಅಗ್ಗದ ಜೀವರಕ್ಷಕ ಔಷಧಿಗಳಿಗೆ ವಿರೋಧ ಎಂದು ಪರಿಗಣಿಸುತ್ತೇವೆ. ಸಮೃದ್ಧವಾಗಿ ಬೆಳೆಯುತ್ತಿರುವ ಭಾರತೀಯ ಔಷಧ ಉತ್ಪಾದನೆ ಉದ್ಯಮ ವಿಶ್ವದ ಫಾರ್ಮಸಿಯಾಗಿ ಬೆಳೆಯುತ್ತಿದೆ" ಎಂದು ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್ ಹೇಳಿಕೆ ನೀಡಿದ್ದಾರೆ.

ಅಮೆರಿಕದ ವ್ಯಾಪಾರಿ ಪಾಲುದಾರ ದೇಶಗಳಲ್ಲಿ ಬೌದ್ಧಿಕ ಆಸ್ತಿಯ ಸಂರಕ್ಷಣೆ ಮತ್ತು ಕಾನೂನು ಜಾರಿ ಕುರಿತ ಯುಎಸ್‌ಟಿಆರ್ ವರದಿಯಲ್ಲಿ ಭಾರತವನ್ನು ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಗಾಗಿ ಆದ್ಯತೆಯ ಮೇಲೆ ನಿಗಾ ಇಡಬೇಕಾದ ಪಟ್ಟಿಯಲ್ಲಿ ಇಡಲಾಗಿದೆ.

ಜೀವರಕ್ಷಕ ಔಷಧಿಗಳು ಕಡಿಮೆ ವೆಚ್ಚದ್ದಾಗಿದ್ದರೂ ಗುಣಮಟ್ಟದ ಉತ್ಪನ್ನಗಳು. ಕೇವಲ ಪ್ರಮಾಣಿತ ಫಾರ್ಮಸ್ಯೂಟಿಕಲ್ ಉತ್ಪನ್ನಗಳನ್ನು ಮಾತ್ರ ಇಲ್ಲಿಂದ ರಫ್ತು ಮಾಡಲಾಗುತ್ತದೆ. ಸ್ಥಳೀಯವಾಗಿ ಶೇಕಡ 75ಕ್ಕೂ ಅಧಿಕ ಮಾರಾಟ ಜೀವರಕ್ಷಕ ಔಷಧಿಗಳಿಂದ ಆಗುತ್ತದೆ ಎಂದು ಸುದಾನ್ ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News