×
Ad

ಬಿಲ್ಕಿಸ್ ಬಾನು ಅವರ ಸುದೀರ್ಘ ಹೋರಾಟದ ರೋಚಕ ಕಥೆಯಿದು

Update: 2019-04-28 10:22 IST

ಅಹ್ಮದಾಬಾದ್, ಎ.28: ಬಿಲ್ಕಿಸ್ ಬಾನು ತಮ್ಮ ನಾಲ್ಕು ವರ್ಷದ ಪುಟ್ಟ ಮಗುವನ್ನು ಎಂದೂ ತೆಕ್ಕೆಯಿಂದ ಇಳಿಸಿದ್ದಿಲ್ಲ; ಪುಟ್ಟ ಮಗು ಸದಾ ತಾಯಿಯ ಮಡಿಲಲ್ಲಿರುತ್ತದೆ ಅಥವಾ ಕಣ್ಣಳತೆಯ ದೂರದಲ್ಲೇ ಆಟವಾಡುತ್ತಿರುತ್ತದೆ. 17 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಕೊನೆಗೂ ನ್ಯಾಯ ಪಡೆದ ದಿಟ್ಟ ಮಹಿಳೆಯ ಮುಖದಲ್ಲಿ ನಗು ಮಿಂಚಿ ಮಾಯವಾಗುವುದು ಐದು ಮಕ್ಕಳ ಬಗ್ಗೆ ಮಾತನಾಡುವಾಗ ಮಾತ್ರ. ಉಳಿದಂತೆ ಬಿಲ್ಕಿಸ್ ಯಾಕುಬ್ ರಸೂಲ್ ಮುಖದಲ್ಲಿ ಚಿಂತೆಯ ಗೆರೆಗಳಷ್ಟೇ ಕಾಣುತ್ತವೆ.

ಹದಿನೇಳು ವರ್ಷಗಳಿಂದ ಬಹುಶಃ ಬಾನು ಸರಿಯಾಗಿ ನಿದ್ದೆ ಮಾಡಿದ್ದಿಲ್ಲ; ಈ ಅವಧಿ ಅವರ ಪಾಲಿಗೆ ಮರಳುಗಾಡಿನ ನಡಿಗೆಯಾಗಿತ್ತು. 2002ರಲ್ಲಿ ಕರ ಸವೇಕರು ಪ್ರಯಾಣಿಸುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿ ನಡೆದ ನಾಲ್ಕು ದಿನಗಳಲ್ಲಿ ಬಿಲ್ಕಿಸ್ ಬಾಳಿನ ಕರಾಳ ದಿನಗಳು ಆರಂಭವಾಗಿದ್ದವು. ಇಡೀ ಗುಜರಾತ್‌ನಲ್ಲಿ ಕೋಮುದಳ್ಳುರಿ ಹಬ್ಬಿತು. ಇವರ ಕುಟುಂಬ ರಣದಿಕ್‌ಪುರ ಗ್ರಾಮದ ತಮ್ಮ ಮನೆಯಿಂದ ಟ್ರಕ್ ಒಂದರಲ್ಲಿ ತಪ್ಪಿಸಿಕೊಳ್ಳಲು ನಿರ್ಧರಿಸಿತು. ಆದರೆ ಈ ನಿರ್ಧಾರ ತೀರಾ ತಡವಾಗಿತ್ತು. ಮಾರ್ಚ್ 3ರಂದು ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಅವರನ್ನು ಟ್ರಕ್‌ನಿಂದ ಎಳೆದು, ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಯಿತು. ಇಷ್ಟು ಮಾತ್ರವಲ್ಲದೇ, ಆಕೆಯ ಕಣ್ಣೆದುರೇ ಮೂರು ವರ್ಷದ ಮಗಳು ಸಲೇಹಾ ಸೇರಿದಂತೆ ಕುಟುಂಬದ 14 ಮಂದಿಯ ಹತ್ಯೆ ಮಾಡಲಾಯಿತು.

ಬಿಲ್ಕಿಸ್ ಸಾವನ್ನಪ್ಪಿದ್ದಾರೆ ಎಂದು ಭಾವಿಸಿ ದಂಗೆಕೋರರು ಅವರನ್ನು ಬಿಟ್ಟು ಹೋದರು. ಆದರೆ ಬಿಲ್ಕಿಸ್ಗೆ ಪ್ರಜ್ಞೆ ಮರುಕಳಿಸಿತು. ಪೆಟ್ಟಿಕೋಟ್‌ನಿಂದ ಮುಖ ಮುಚ್ಚಿಕೊಂಡು ನೆರವು ಯಾಚಿಸಿ ನಡೆದರು. ಮನೆಯಿಂದ ಹೊರಗೆ ಕಾಲಿಡದಿದ್ದ ಬಿಲ್ಕಿಸ್‌ಗೆ ಆಗ 19 ವರ್ಷ. ಮರುದಿನವೇ ಎಫ್‌ಐಆರ್ ದಾಖಲಿಸಿದರೂ, ಪುರಾವೆ ಬಯಸಿ ಮ್ಯಾಜಿಸ್ಟ್ರೇಟರು ಪ್ರಕರಣ ರದ್ದುಪಡಿಸಿದರು. ಆದರೆ ಮಾನವ ಹಕ್ಕುಗಳ ಆಯೋಗ ಬಿಲ್ಕಿಸ್ ಬೆಂಬಲಕ್ಕೆ ನಿಂತಿತು. ಹಲವು ತಿರುವುಗಳ ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಾಯಿತು. ವಿಚಾರಣೆ ವೇಳೆ 20 ದಿನಗಳ ಕಾಲ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಲಾಯಿತು. 2017ರ ಮೇ ತಿಂಗಳಲ್ಲಿ ಈ ಸಂಬಂಧ ಮುಂಬೈ ಹೈಕೋರ್ಟ್ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

2012ರ ನಿರ್ಭಯಾ ಪ್ರಕರಣದ ಬಳಿಕ ದೇಶಾದ್ಯಂತ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹ ಕೇಳಿಬಂದರೂ, ಬಿಲ್ಕಿಸ್ ಮಾತ್ರ ಬದ್ಲಾ (ಪ್ರತೀಕಾರ) ಬಯಸಲಿಲ್ಲ. ನಮಗೆ ಪ್ರತೀಕಾರ ಬೇಕಾಗಿಲ್ಲ; ನಮಗೆ ನ್ಯಾಯ ಸಿಕ್ಕಿದರೆ ಸಾಕು ಎನ್ನುವುದು ಆಕೆಯ ನಿಲುವಾಗಿತ್ತು.

ಕುಟುಂಬದಲ್ಲಿ ಉಳಿದುಕೊಂಡ ಏಕೈಕ ಮಹಿಳೆಯಾಗಿ ಮಕ್ಕಳನ್ನು ಭಯದ ನೆರಳಲ್ಲೇ ಬೆಳೆಸುವ ಹೊಣೆ ಬಿಲ್ಕಿಸ್ ಹೆಗಲಿಗೇರಿತು. ಪರೋಲ್‌ನಲ್ಲಿ ಬಿಡುಗಡೆಯಾದ ಆರೋಪಿಗಳ ಭೀತಿಯಿಂದ 17 ವರ್ಷಗಳಲ್ಲಿ 20 ಕಡೆಗೆ ಕುಟುಂಬವನ್ನು ಸ್ಥಳಾಂತರಿಸಿದ್ದಳು; ಅಷ್ಟು ಬಾರಿಯೂ ಮಕ್ಕಳಿಗೆ ಹೊಸ ಶಾಲೆಗೆ ಪ್ರವೇಶ ಪಡೆದಿದ್ದರು.

ಸುಪ್ರೀಂಕೋರ್ಟ್ ಕಳೆದ ವಾರ ಈಕೆಗೆ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದಾಗ ಬಿಲ್ಕಿಸ್, ಗುಜರಾತ್‌ನ ದಹೋದ್ ಜಿಲ್ಲೆಯ ದೇವಗಢ ಬಾರಿಯಾ ಎಂಬಲ್ಲಿ ಒಂದು ಕೊಠಡಿಯ ಮನೆಯಲ್ಲಿದ್ದರು. "ಇದು ಅತ್ಯಂತ ಕಠಿಣ ಬದುಕು; ನನ್ನ ಕಣ್ಣೀರು ಇನ್ನೂ ಒಣಗಿಲ್ಲ" ಎಂದು ನ್ಯಾಯಕ್ಕಾಗಿ ನಡೆಸಿದ ಹೋರಾಟವನ್ನು ನೆನಪಿಸಿಕೊಳ್ಳುತ್ತಾರೆ.

ಅತ್ಯಾಚಾರ ಸಂತ್ರಸ್ತೆ ಪಡೆದ ದೊಡ್ಡ ಮೊತ್ತದ ಪರಿಹಾರ ಎಂಬ ಕಾರಣಕ್ಕೆ ಮಾತ್ರವಲ್ಲದೇ ಹಲವು ಕಾರಣಗಳಿಗೆ ಈ ತೀರ್ಪು ಮಹತ್ವದ್ದಾಗಿದೆ. ಹೋರಾಟಗಾರರು ಹೇಳುವಂತೆ ಸುಪ್ರೀಂ ಕೋರ್ಟ್ ಮೊಟ್ಟಮೊದಲ ಬಾರಿಗೆ ಹೇಗೆ ಮಹಿಳೆ ಹಾಗೂ ಮಕ್ಕಳು ಹಿಂಸೆಗೆ ಬಲಿಯಾಗುತ್ತಾರೆ ಎನ್ನುವುದನ್ನು ಗುರುತಿಸಿದೆ.

ಬಿಲ್ಕಿಸ್ ಅವರ ಹಿರಿಯ ಪುತ್ರಿ 12ನೇ ತರಗತಿಯಲ್ಲಿ ಓದುತ್ತಿದ್ದು ವಕೀಲೆಯಾಗುವ ಕನಸು ಕಾಣುತ್ತಿದ್ದಾರೆ. "ನ್ಯಾಯಕ್ಕಾಗಿ ತಾಯಿ ನಡೆಸಿದ ಹೋರಾಟವನ್ನು ಆಕೆ ನೋಡಿದ್ದಾರೆ. ಆಕೆ ಹಿರಿಯವಳಾಗಿದ್ದರಿಂದ ತಾಯಿಯ ಯಾತನೆ ಅರ್ಥ ಮಾಡಿಕೊಂಡಿದ್ದಾರೆ" ಎಂದು ತಂದೆ ಯಾಕುಬ್ ಹೇಳುತ್ತಾರೆ.
ತೀರಾ ಮೆಲು ಮಾತಿನ ಬಿಲ್ಕಿಸ್, ಸಂತ್ರಸ್ತ ಮಹಿಳೆಯರ ನಿರೀಕ್ಷೆಗಳ ಪ್ರಬಲ ಪ್ರೇರಣೆಯಾಗಿ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News