×
Ad

ಪ್ರಜ್ಞಾ ಠಾಕೂರ್, ಮಸೂದ್‌ಗೆ ಶಾಪ ನೀಡಿದ್ದರೆ ಸರ್ಜಿಕಲ್ ಸ್ಟ್ರೈಕ್ ಅಗತ್ಯವಿರಲಿಲ್ಲ: ದಿಗ್ವಿಜಯ್ ಸಿಂಗ್ ವ್ಯಂಗ್ಯ

Update: 2019-04-28 11:56 IST

 ಭೋಪಾಲ್, ಎ.28: ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಇ-ಮುಹಮ್ಮದ್‌ನ ಮುಖ್ಯಸ್ಥ ಮಸೂದ್ ಅಝರ್‌ಗೆ  ಪ್ರಜ್ಞಾ ಸಿಂಗ್ ಠಾಕೂರ್ ಶಾಪ ನೀಡಿದ್ದರೆ, ನಿರ್ದಿಷ್ಟ ದಾಳಿ(ಸರ್ಜಿಕಲ್‌ ಸ್ಟ್ರೈಕ್ )ನಡೆಸುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಭೋಪಾಲ್ ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ದಿಗ್ವಿಜಯ್ ಸಿಂಗ್ ತನ್ನ ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು ವ್ಯಂಗ್ಯವಾಡಿದ್ದಾರೆ.

ತನ್ನ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ದಿಗ್ವಿಜಯ್ ಸಿಂಗ್,‘‘ದೇಶಕ್ಕಾಗಿ ಮಹಾನ್ ತ್ಯಾಗ ಮಾಡಿ ಹುತಾತ್ಮರೆನಿಸಿಕೊಂಡಿರುವ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ಮುಖ್ಯಸ್ಥ ಹೇಮಂತ್ ಕರ್ಕರೆ ಅವರಿಗೆ ಶಾಪ ನೀಡಿದ್ದಾಗಿ ಪ್ರಜ್ಞಾ ಠಾಕೂರ್ ಹೇಳಿಕೊಂಡಿದ್ದಾರೆ. ಮಸೂದ್ ಅಝರ್‌ಗೂ ಶಾಪ ನೀಡಿದ್ದರೆ ಸರ್ಜಿಕಲ್ ಸ್ಟ್ರೈಕ್  ನಡೆಸುವ ಅಗತ್ಯವೇ ಇರಲಿಲ್ಲ’’ ಎಂದರು.

  ನಾನು ನೀಡಿದ ಶಾಪದಿಂದಾಗಿ ಹೇಮಂತ್ ಕರ್ಕೆರ ಸಾವನ್ನಪ್ಪಿದ್ದಾರೆ ಎಂದು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಠಾಕೂರ್ ಇತ್ತೀಚೆಗೆ ಹೇಳಿಕೆ ನೀಡಿದ್ದು, ಆಕೆಯ ಈ ಹೇಳಿಕೆಯನ್ನು ಎಲ್ಲರೂ ತೀವ್ರವಾಗಿ ಖಂಡಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ ಬಿಜೆಪಿಯ ಹಲವು ನಾಯಕರು ಭೋಪಾಲ್‌ನಿಂದ ಪ್ರಜ್ಞಾ ಠಾಕೂರ್ ಸ್ಪರ್ಧಿಸುತ್ತಿರುವುದನ್ನು ಸಮರ್ಥಿಸಿಕೊಂಡಿದ್ದರು.

ಪ್ರಧಾನಿ ವಿರುದ್ಧ ಹರಿಹಾಯ್ದ ದಿಗ್ವಿಜಯ್ ಸಿಂಗ್,‘‘ಭಯೋತ್ಪಾದಕರು ನರಕದಲ್ಲಿ ಅಡಗಿ ಕುಳಿತ್ತಿದ್ದರೂ ಅವರನ್ನು ಹುಡುಕಿ ಬೇಟೆಯಾಗುತ್ತೇವೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ದೇಶದಲ್ಲಿ ಪುಲ್ವಾಮ, ಪಠಾಣ್‌ಕೋಟ್ ಹಾಗೂ ಉರಿಯಲ್ಲಿ ಉಗ್ರರ ದಾಳಿ ನಡೆದಾಗ ಪ್ರಧಾನಿ ಎಲ್ಲಿ ಹೋಗಿದ್ದರು ಎಂದು ಕೇಳಲು ಬಯಸುವೆ. ಇಂತಹ ದಾಳಿಗಳನ್ನು ತೊಡೆದುಹಾಕಲು ನಿಮ್ಮಿಂದೇಕೆ ಸಾಧ್ಯವಾಗಲಿಲ್ಲ’’ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News