ಪ್ರಜ್ಞಾ ಸಿಂಗ್ ಸ್ಪರ್ಧೆಯಿಂದ ಶಿವರಾಜ್ ಸಿಂಗ್ ಇಮೇಜ್‍ಗೆ ಧಕ್ಕೆ: ಬಿಜೆಪಿ ನಾಯಕಿ

Update: 2019-04-28 08:28 GMT

ಭೋಪಾಲ್, ಎ.28: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಭೋಪಾಲ್ ಕ್ಷೇತ್ರದಿಂದ ಕಣಕ್ಕೆ ಇಳಿಸಿರುವ ಬಿಜೆಪಿ ಕ್ರಮವನ್ನು ಪಕ್ಷದ ನಾಯಕಿ ಫಾತಿಮಾ ಸಿದ್ದಿಕಿ ಕಟುವಾಗಿ ಟೀಕಿಸಿದ್ದಾರೆ.

ಫಾತಿಮಾ ಸಿದ್ದಿಕಿ, ಕಳೆದ ವರ್ಷ ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ನಲ್ಲಿ ಸ್ಪರ್ಧಿಸಿದ ಏಕೈಕ ಮುಸ್ಲಿಂ ಅಭ್ಯರ್ಥಿ. ಪಕ್ಷದ ಈ ನಿರ್ಧಾರ ಅಲ್ಪಸಂಖ್ಯಾತ ಸಮುದಾಯದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕ ಶಿವರಾಜ್‍ ಸಿಂಗ್ ಚವ್ಹಾಣ್ ಅವರ ಇಮೇಜ್‍ಗೆ ಧಕ್ಕೆ ತಂದಿದೆ ಎಂದು ಅಭಿಪ್ರಾಯಪಟ್ಟರು.

ಭೋಪಾಲ್ (ಉತ್ತರ) ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಫಾತಿಮಾ, ಕಾಂಗ್ರೆಸ್ ಪಕ್ಷದ ಆರಿಫ್ ಅಕೀಲ್ ವಿರುದ್ಧ ಸೋತಿದ್ದರು. ತಮ್ಮ ಅಭಿಪ್ರಾಯವನ್ನು ಪಕ್ಷಕ್ಕೆ ತಿಳಿಸಿದ್ದಾಗಿ ಅವರು ಹೇಳಿದರು.

"ಪ್ರಜ್ಞಾ ಠಾಕೂರ್ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಪ್ರಚಾರ ಮಾಡಬಾರದು. ಆಕೆ ಗೆಲ್ಲುತ್ತಾಳೆ ಎಂದು ನನಗೆ ಅನಿಸುವುದಿಲ್ಲ. ಇದು ಇತರ ಪ್ರದೇಶದ ಮೇಲೂ ಪರಿಣಾಮ ಬೀರಲಿದ್ದು, ಧ್ರುವೀಕರಣಕ್ಕೆ ಕಾರಣವಾಗಲಿದೆ" ಎಂದು ಸಂಡೇ ಎಕ್ಸ್‍ಪ್ರೆಸ್ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

ಪ್ರಜ್ಞಾ ಅವರನ್ನು ಕಣಕ್ಕೆ ಇಳಿಸಿದ್ದನ್ನು ವಿರೋಧಿಸಿ ಫಾತಿಮಾ, ಬಿಜೆಪಿ ಪ್ರಚಾರಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News