ಇವಿಎಂಗಳಲ್ಲಿ ಕಮಲ ಚಿಹ್ನೆಯ ಕೆಳಗೆ ‘ಬಿಜೆಪಿ’ ಎಂಬ ಬರಹ: ವಿಪಕ್ಷಗಳ ಆರೋಪ
ಹೊಸದಿಲ್ಲಿ, ಎ.28: ಇವಿಎಂಗಳಲ್ಲಿ ಕಮಲದ ಚಿಹ್ನೆಯ ಕೆಳಗಡೆ ಬಿಜೆಪಿ ಎಂದು ಬರೆಯಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ, ತೃಣಮೂಲದ ಡೆರೆಕ್ ಒಬ್ರಿಯಾನ್ ಮತ್ತು ದಿನೇಶ್ ತ್ರಿವೇದಿ ಸೇರಿದಂತೆ 10 ವಿಪಕ್ಷಗಳ ಸದಸ್ಯರ ನಿಯೋಗ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾರನ್ನು ಭೇಟಿಯಾಗಿ ಇವಿಎಂನಿಂದ ಬಿಜೆಪಿಯ ಹೆಸರನ್ನು ತೆಗೆಯಬೇಕು ಅಥವಾ ಎಲ್ಲಾ ಪಕ್ಷಗಳ ಹೆಸರನ್ನು ನಮೂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ವಿಪಕ್ಷಗಳ ಆರೋಪವನ್ನು ನಿರಾಕರಿಸಿದ್ದಾರೆ. “ಪಕ್ಷದ ಚಿಹ್ನೆಯ ಔಟ್ ಲೈನ್ ತೆಳುವಾಗಿದೆ. ಅದನ್ನು ದಪ್ಪವಾಗಿಸಬೇಕು ಎಂದು 2013ರಲ್ಲಿ ಬಿಜೆಪಿ ಚು.ಆಯೋಗವನ್ನು ಸಂಪರ್ಕಿಸಿತ್ತು. ಅವರ ಮನವಿ ಮೇರೆಗೆ ಕಮಲದ ಔಟ್ ಲೈನನ್ನು ಬೋಲ್ಡ್ ಮಾಡಲಾಯಿತು. ಹಾಗು ಕಮಲದ ಕೆಳಗೆ ನೀರಿನ ಗುರುತನ್ನು ಸೇರಿಸಲಾಯಿತು. ಈ ಗುರುತುಗಳು F ಮತ್ತು P ಯ ಹಾಗೆ ಕಾಣುತ್ತಿದೆ ಹೊರತು ಬಿಜೆಪಿಯಂತೆ ಅಲ್ಲ” ಎಂದು ಹೇಳಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.