ಮಂಗಳೂರು: ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಸ್ಸಿ-ಎಸ್ಟಿ ಮಾಸಿಕ ಸಭೆ
ಮಂಗಳೂರು, ಎ.28: ಪರವಾನಿಗೆ ರಹಿತ ಫೈನಾನ್ಸ್‌ವೊಂದನ್ನು ನಡೆಸುತ್ತಿರುವ ಪ್ರವೀಣ್ ಬಿನ್ ಶಿವಾನಂದ್ ಎಂಬವರು ಕಾರ್ಕಳ ಮೂಲದ ವ್ಯಕ್ತಿಗೆ ಲಕ್ಷಾಂತರ ರೂ. ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಅಮಾಯಕರು ಮೀಟರ್ ಬಡ್ಡಿದಂಧೆಗೆ ಸಿಲುಕಿ ದೂರು ನೀಡದಂತಹ ಇಕ್ಕಟ್ಟಿಗೊಳಗಾಗಿದ್ದಾರೆ ಎಂದು ಎಸ್ಸಿ-ಎಸ್ಟಿ ಮುಖಂಡ ಆನಂದ ಅವಲತ್ತುಕೊಂಡರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಮೀಟರ್ ಬಡ್ಡಿದಂಧೆಕೋರರು ಹಣಬಲ, ತೋಳ್ಬಲದಿಂದ ಅಮಾಯಕರನ್ನು ಬೆದರಿಸುವ ಘಟನೆಗಳೂ ನಡೆದಿವೆ ಎಂದರು.
ಕಾರ್ಕಳ ಮೂಲದ ಸಂತೋಷ್ ಎಂಬವರಿಗೆ ಫೈನಾನ್ಸ್‌ವೊಂದರ ಪ್ರವೀಣ್ ಎಂಬವರು ಸಾಲ ನೀಡಿ, ಮರುಪಾವತಿಗಾಗಿ ಬೆದರಿಕೆ ಹಾಕುತ್ತಿದ್ದಾರೆ. ನ್ಯಾಯವಾದಿಗಳನ್ನು ಬಳಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಅಮಾಯಕ ಸಂತೋಷ್ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಕಳೆದ ಮಾರ್ಚ್ 14ರಂದು ಡಿಸಿಪಿಯವರಿಗೆ ಮಾಹಿತಿ ನೀಡಿ ಬಂದರ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಚುನಾವಣೆ ಬಿಗಿಭದ್ರತೆಯಲ್ಲಿ ಪೊಲೀಸ್ ಇಲಾಖೆ ತೊಡಗಿದ್ದರಿಂದ ತನಿಖೆ ನನೆಗುದಿಗೆ ಬಿದ್ದಿದೆ. ಚುನಾವಣೆ ಬಳಿಕವೂ ಪೊಲೀಸ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮಿಗಣೇಶ್ ಕೆ., ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
‘ನಗರದಲ್ಲಿ ರಾತ್ರಿ ಪಾಳಿಯ ಪೊಲೀಸ್ ಗಸ್ತು ವ್ಯವಸ್ಥೆ ಇದ್ದು, ಎಸ್ಸಿ-ಎಸ್ಟಿ ಕಾಲನಿಗಳಿಗೆ ಯಾವುದೇ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಲು ಬರುವುದಿಲ್ಲ. ನಗರದ ಬಳ್ಳಾಲ್‌ಬಾಗ್, ಉರ್ವ, ಕೊರಗರ ಓಣಿ, ಕೊಡಿಕಲ್, ಕಂಕನಾಡಿ, ಕದ್ರಿಮಣ್ಣಗುಡ್ಡೆ ಸೇರಿದಂತೆ ವಿವಿಧೆಡೆ ಪೊಲೀಸರು ಬರುವುದಿಲ್ಲ. ಇಲ್ಲಿ ಸಿಸಿಟಿವಿಯ ವ್ಯವಸ್ಥೆಯೂ ಇಲ್ಲ. ಇದರಿಂದ ಹೊರಗಿನವರು ಬಂದು ತಮ್ಮ ಸಮುದಾಯದ ಯುವಕರನ್ನು ದಂಧೆಗಿಳಿಸುವ ಕೆಲಸಗಳೂ ನಡೆಯುತ್ತಿವೆ’ ಎಂದು ಎಸ್ಸಿ-ಎಸ್ಟಿ ಮುಖಂಡ ಆನಂದ ದೂರಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ, ರಾತ್ರಿ ಪಾಳಿಯ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಎಲ್ಲೆಡೆಯೂ ಹಾಕಲಾಗುವುದು. ಸಮಾಜವನ್ನು ಸುವ್ಯವಸ್ಥೆಯಾಗಿಡುವುದೇ ಪೊಲೀಸ್ ಇಲಾಖೆ ಆಶಯವಾಗಿದೆ ಎಂದರು.
ಎಸ್ಸಿ-ಎಸ್ಟಿ ಮುಖಂಡ ಆನಂದ ಮಾತನಾಡಿ, ಶಾಲಾ-ಕಾಲೇಜುಗಳಿಗೆ ರಜೆ ಸಿಕ್ಕಿದೆ. ಮುಂದಿನ ತಿಂಗಳು ಶಾಲಾ-ಕಾಲೇಜುಗಳು ಪುನಾರಂಭಗೊಳ್ಳಲಿವೆ. ಖಾಸಗಿ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳನ್ನು ಕೊಂಡೊಯ್ಯಲಾಗುತ್ತಿದೆ. ಇದರಿಂದ ಅಪಾಯವೇ ಹೆಚ್ಚು. ಮಂಗಳೂರು ನಗರದಲ್ಲಿಯೇ ಅಪಘಾತದಲ್ಲಿ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಕೆಲ ಶಾಲಾ- ಕಾಲೇಜುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೊನೇಶನ್ ಪಡೆಯುತ್ತಿದ್ದು, ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಡಿಸಿಪಿ ಲಕ್ಷ್ಮಿಗಣೇಶ್ ಕೆ., ಶಾಲಾ-ಕಾಲೇಜುಗಳ ಆರಂಭವಾಗುವ ಮೊದಲೇ ಶಾಲಾ-ಕಾಲೇಜು ಹಾಗೂ ಸ್ಕೂಲ್ ಬಸ್, ಖಾಸಗಿ ವಾಹನಗಳಿಗೆ ಸಂಬಂಧಪಟ್ಟವರು ಸಭೆ ಕರೆದು ಸೂಚನೆ ನೀಡಲಾಗುವುದು ಎಂದು ಹೇಳಿದರು.
ಅಮಲ ಜ್ಯೋತಿ ಮಾತನಾಡಿ, ಮನಪಾ ವ್ಯಾಪ್ತಿಯ ಪದವು ಗ್ರಾಮದಲ್ಲಿ ಭೂಪರಿವರ್ತನೆಗೊಂಡಿರುವ ಸ್ಥಳವನ್ನು ಶಿವನಾಥನ್ ಎಂಬವರು ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಅದೇ ಆಸ್ತಿಯನ್ನು ಶಿವನಾಥನ್ ಅವರು ತನ್ನ ಪತ್ನಿ ಎಸ್.ರಾಜೇಶ್ವರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ. ಒಂದೇ ಆಸ್ತಿಗೆ ಎರಡು ಖಾತೆ ನಂಬರ್‌ಗಳನ್ನು ನೀಡಲಾಗಿದೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ದಲಿತರಿಗೆ ಸರಿಯಾಗಿ ಆರ್‌ಟಿಸಿ, ಮನೆ, ಆಧಾರ್ ಕೊಡುವುದಿಲ್ಲ. ಅಂತಹದಲ್ಲಿ ಅವರಿಗೆ ಎರಡೆರಡು ಖಾತೆ ನಂಬರ್ ಕೊಡುತ್ತಾರೆ. ಈ ಬಗ್ಗೆ ನ್ಯಾಯ ಕೊಡಿಸಲು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ, ಲೋಕಾಯುಕ್ತದಲ್ಲಿ ಈಗ ಕೇಸನ್ನು ದಾಖಲಿಸುವುದಿಲ್ಲ. ಈ ಬಗ್ಗೆ ಎಸಿಬಿಗೆ ದೂರು ನೀಡಬೇಕು. ಇಲ್ಲವೇ ಪೊಲೀಸ್ ಇಲಾಖೆಗೆ ಬರಹದ ರೂಪದಲ್ಲಿ ಮನವಿ ಸಲ್ಲಿಸಲು ಸೂಚಿಸಿದರು.
ದಲಿತ ಮುಖಂಡ ಸುಧಾಕರ್ ಮಾತನಾಡಿ, ಮಂಗಳೂರು ತಾಲೂಕಿನ ಸುರತ್ಕಲ್‌ನ ಸರಕಾರಿ ಜಮೀನಿನಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ ಕಾವೇರಿ ಎಂಬವರ ಮನೆ ಸಾಮಗ್ರಿಗಳನ್ನು ಹೊರಹಾಕಲಾಗಿದೆ. ಪಾಲಿಕೆಯಿಂದ ಅಕ್ರಮವಾಗಿ ಮನೆಗೆ ಬೀಗ ಜಡಿದು ಮಹಿಳೆಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಕಾವೇರಿಯವರ ಮನೆ ಅಡಿ ಜಾಗದ ಸಕ್ರಮಿಸುವ ಬಗ್ಗೆ 94-ಸಿ ಯಂತೆ ಹಕ್ಕುಪತ್ರ ನೀಡುವ ಅವಕಾಶವಿದ್ದರೂ ಈ ಜಾಗವನ್ನು ಸಿಆರ್‌ಝಡ್ ಒಳಪಟ್ಟಿರುವುದರಿಂದ ಮಹಿಳೆಯ ಅರ್ಜಿ ತಿರಸ್ಕರಿಸಲಾಗಿದೆ. ಮತ್ತೊಬ್ಬರ ಲಾಭಕ್ಕಾಗಿ ಕಾವೇರಿಯವರ ಮನೆಗೆ ಬೀಗ ಜಡಿದು, ಕುಟುಂಬವನ್ನು ಬೀದಿಪಾಲು ಮಾಡಲಾಗಿದೆ. ಬಡಕುಟುಂಬಕ್ಕೆ ನ್ಯಾಯ ಹಾಗೂ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮಿಗಣೇಶ್ ಕೆ., ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮತ್ತೋರ್ವ ದಲಿತ ಮುಖಂಡ ಮಾತನಾಡಿ, ವೆನ್‌ಲಾಕ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಸಿಬ್ಬಂದಿಯು ರೋಗಿಗಳ ಜೊತೆ ಬಂದವರಿಗೆ ರೌದ್ರ ವರ್ತನೆ, ದೌರ್ಜನ್ಯ ನಡೆಸುತ್ತಿದ್ದಾರೆ. ರಾತ್ರಿ ಎಂಟು ಗಂಟೆಯ ನಂತರ ಒಳಪ್ರವೇಶಕ್ಕೆ ನಿರಾಕರಿಸುತ್ತಾರೆ. ಮೆಡಿಶನ್ ತರಲು ಬಿಡುವುದಿಲ್ಲ. ಸೌಜನ್ಯದಿಂದ ವರ್ತಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಡಿಸಿಪಿ, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಡಿಸಿಪಿ ಶ್ರೀನಿವಾಸ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಎಸ್ಸಿ-ಎಸ್ಟಿ ಸಭೆ ಕೊನೆ ಶನಿವಾರಕ್ಕೆ ಮಾರ್ಪಾಡು
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತಿ ತಿಂಗಳ ಕೊನೆಯ ರವಿವಾರ ನಡೆಯುವ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮಾಸಿಕ ಸಭೆಯನ್ನು ಮುಂದಿನ ದಿನಗಳಲ್ಲಿ ತಿಂಗಳ ಕೊನೆ ಶನಿವಾರದಂದು ಹಮ್ಮಿಕೊಳ್ಳಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದರು.