ಕಟಪಾಡಿ ರಾ.ಹೆದ್ದಾರಿ ಜಂಕ್ಷನ್‌ನಲ್ಲಿ ಐದು ತಾಸು ಟ್ರಾಫಿಕ್ ಜಾಮ್

Update: 2019-04-28 12:37 GMT

ಕಾಪು, ಎ.28: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಇಂದು ಉಂಟಾದ ಸುಮಾರು ಐದು ತಾಸುಗಳ ಟ್ರಾಫಿಕ್ ಜಾಮ್ ಸುಗಮಗೊಳಿಸಲು ಪೊಲೀಸರು ಜಂಕ್ಷನ್‌ನ ಮುಖ್ಯ ಕ್ರಾಸನ್ನೇ ಬ್ಯಾರಿಕೇಡ್ ಮೂಲಕ ಬಂದ್ ಮಾಡಿದರು. ಇದರಿಂದ ವಾಹನಗಳು ರಸ್ತೆ ದಾಟಲು ಆರು ಕಿ.ಮೀ. ಸುತ್ತಿ ಬಳಸಿ ಬರಬೇಕಾಯಿತು. ಈ ಕ್ರಮದ ವಿರುದ್ಧ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದಗಳು ನಡೆದವು.

ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಪ್ರಮುಖ ಜಂಕ್ಷನ್ ಗಳಲ್ಲಿ ಒಂದಾದ ಕಟಪಾಡಿ ಪೇಟೆಯಲ್ಲಿ ಪೂರ್ವಕ್ಕೆ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಶಿರ್ವ, ಮಣಿಪುರಕ್ಕೆ ಸಾಗುವ ರಸ್ತೆ ಇದ್ದರೆ, ಪಶ್ಚಿಮಕ್ಕೆ ಕಟಪಾಡಿ ಪೇಟೆ, ಬಸ್ ನಿಲ್ದಾಣ, ಮಟ್ಟು, ಪಳ್ಳಿಗುಡ್ಡೆಗೆ ಹೋಗುವ ರಸ್ತೆ ಇದೆ. ಇದರಿಂದಾಗಿ ಈ ಜಂಕ್ಷನ್ ಸದಾ ಟ್ರಾಫಿಕ್ ಕಿರಿಕಿರಿಗೆ ತುತ್ತಾಗುತ್ತಿದೆ.

ಇಂದು ಸಾಕಷ್ಟು ಶುಭ ಕಾರ್ಯ ಇದ್ದ ಕಾರಣ ಬೆಳಗ್ಗೆಯಿಂದ ಕಟಪಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಇದರ ಪರಿಣಾಮ ನಾಲ್ಕು ಕೂಡು ರಸ್ತೆಗಳು ವಾಹನಗಳಿಂದ ಬ್ಲೋಕ್ ಆಗಿ ವಾಹನ ಸಂಚಾರವೇ ಸ್ಥಗಿತ ಗೊಂಡಿತ್ತು. ಬಳಿಕ ಆಗಮಿಸಿದ ಪೊಲೀಸ್ ಸಿಬ್ಬಂದಿ ವಾಹನ ಸಂಚಾರ ಸುಗಮ ಗೊಳಿಸಲು ಹರಸಾಹಸ ಪಟ್ಟರು. ಅವರೊಂದಿಗೆ ಸಾವಜರ್ನಿಕರು ಕೂಡ ಕೈ ಜೋಡಿಸಿದರು.
ಆದರೂ ಸಮಸ್ಯೆ ಬಗೆಹರೆಯದೆ ಮಧ್ಯಾಹ್ನ ಒಂದು ಗಂಟೆಯವರೆಗೂ ಮುಂದುವರೆಯಿತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸ್ ವೃತ್ತ ನಿರೀಕ್ಷಕರು ಜಂಕ್ಷನ್‌ನಲ್ಲಿರುವ ಯು ಟರ್ನ್ ಕ್ರಾಸ್‌ನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಿದರು. ಶಿರ್ವ ರಸ್ತೆಯಿಂದ ಆಗಮಿಸಿದ ವಾಹನಗಳನ್ನು ಮಂಗಳೂರು ಕಡೆ ಹಾಗೂ ಕಟಪಾಡಿ ಬಸ್ ನಿಲ್ದಾಣದಿಂದ ಕ್ರಾಸ್ ಆಗಬೇಕಾದ ವಾಹನಗಳನ್ನು ಉಡುಪಿ ಕಡೆ ಕಳುಹಿಸಿಕೊಡಲಾಯಿತು. ಕೇವಲ ಮಂಗಳೂರು ಮತ್ತು ಉಡುಪಿ ಕಡೆ ಸಾಗುವ ರಸ್ತೆಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕೊಡಲಾಯಿತು.

ಇದರ ಪರಿಣಾಮ ಶಿರ್ವ ಕಡೆಯಿಂದ ಉಡುಪಿ ಕಡೆ ಮತ್ತು ಕಟಪಾಡಿ ಪೇಟೆಗೆ ಹೋಗಬೇಕಾದ ವಾಹನಗಳು ಮೂರು ಕಿ.ಮೀ. ದೂರದಲ್ಲಿರುವ ಪಾಂಗಾಳ ಸಮೀಪದ ಮೂಡಬೆಟ್ಟು ಯು ಟರ್ನ್‌ವರೆಗೆ ಸಾಗಿ ಮತ್ತೆ ಮೂರು ಕಿ.ಮೀ. ದೂರದ ಕಟಪಾಡಿಗೆ ಬರಬೇಕಾಯಿತು. ಅದೇ ರೀತಿ ಕಟಪಾಡಿ ಪೇಟೆಯಿಂದ ಶಿರ್ವ ರಸ್ತೆಗೆ ಬರಬೇಕಾದವರು ಮೂರು ಕಿ.ಮೀ. ದೂರ ಉದ್ಯಾವರ ಬೈಪಾಸ್‌ನಲ್ಲಿರುವ ಯು ಟರ್ನ್‌ವರೆಗೆ ಸಾಗಿ ಮತ್ತೆ ಮೂರು ಕಿ.ಮೀ. ದೂರದಲ್ಲಿರುವ ಕಟಪಾಡಿಗೆ ಬರಬೇಕಾಯಿತು. ಹೀಗೆ ಕಟಪಾಡಿ ಜಂಕ್ಷನ್‌ನಲ್ಲಿ ರಸ್ತೆ ಕ್ರಾಸ್ ಮಾಡಬೇಕಾದ ವಾಹನಗಳು ಸುಮಾರು ಆರು ಕಿ.ಮೀ ಕ್ರಮಿಸಬೇಕಾಯಿತು.

ಪೊಲೀಸರ ಈ ಕ್ರಮದಿಂದ ಆಕ್ರೋಶಗೊಂಡ ರಿಕ್ಷಾ ಚಾಲಕರು, ಬೈಕ್ ಸವಾರರು ಹಾಗೂ ಸ್ಥಳೀಯರು ಕಾಪು ವೃತ್ತ ನಿರೀಕ್ಷಕರೊಂದಿಗೆ ವಾಗ್ವಾದಕ್ಕೆ ಇಳಿದರು. ‘100 ಮೀಟರ್ ದೂರದ ರಸ್ತೆ ದಾಟಬೇಕಾದರೆ ಆರು ಕಿ.ಮೀ. ದೂರ ಕ್ರಮಿಸಬೇಕಾಗಿದೆ. ಬೆಳಗ್ಗೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದರೂ ಒಂದೇ ಒಂದು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಇರಲಿಲ್ಲ. ಬೆಳಗ್ಗೆಯೇ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಇರುತ್ತಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಸ್ಥಳೀಯರು ದೂರಿದರು.

ಸುಮಾರು ನಾಲ್ಕೈದು ತಾಸುಗಳ ನಂತರ ಟ್ರಾಫಿಕ್ ಜಾಮ್ ಸುಗಮಗೊಂಡು, ಮುಕ್ಕಾಲು ಗಂಟೆಯ ಬಳಿಕ ಪೊಲೀಸರು ಜಂಕ್ಷನ್ ಕ್ರಾಸ್‌ನಲ್ಲಿ ಅಳವಡಿಸಲಾದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ಸಿಗ್ನಲ್ ಅಳವಡಿಕೆಗೆ ಒತ್ತಾಯ
ಕಳೆದ ಡಿಸೆಂಬರ್ ತಿಂಗಳಲ್ಲಿ ಈ ಹಿಂದಿನ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಅರಿತು ಕಟಪಾಡಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೂರು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆದರೆ ಇಲಾಖೆ ಇದಕ್ಕೆ ಅವಕಾಶ ನೀಡಿಲ್ಲ. ಇದೀಗ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವ ಸ್ಥಳೀಯರು ಈ ಜಂಕ್ಷನ್‌ಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು ಮತ್ತು ಶಾಶ್ವತ ಪೊಲೀಸ್ ಸಿಬ್ಬಂದಿಯನ್ನು ನಿಜಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News