×
Ad

ಮಾಲೆಗಾಂವ್ ಸ್ಫೋಟವನ್ನು ಸಮರ್ಥಿಸಿದ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ

Update: 2019-04-28 19:31 IST

ಮಂಗಳೂರು, ಎ.28: ಮಾಲೆಗಾಂವ್ ಸ್ಫೋಟ ಪ್ರಕರಣವು ‘ಪ್ರತಿಭಟನೆ’ ಎನ್ನುವ ಮೂಲಕ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಭಯೋತ್ಪಾದನಾ ಕೃತ್ಯವನ್ನು ಸಮರ್ಥಿಸಿ ವಿವಾದ ಸೃಷ್ಟಿಸಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ‘ಜಿಜ್ಞಾಸು’ ಎನ್ನುವ ಗ್ರೂಪ್ ಒಂದರಲ್ಲಿ ಪೋಸ್ಟ್ ಹಾಕಿರುವ ಅವರು, “ಇಸ್ಲಾಮಿಕ್ ಉಗ್ರವಾದದ ಬಗ್ಗೆ ಮಾತನಾಡಿದ ಕೂಡಲೆ ಹೇಳುವುದು ಮಾಲೆಗಾಂವ್ ಬ್ಲಾಸ್ಟ್ ಬಗ್ಗೆ, ಸಾಧ್ವಿ ಹಾಗೂ ಪುರೋಹಿತ್ ಬಗ್ಗೆ. ಅದನ್ನು ಹಿಂದೂ ಭಯೋತ್ಪಾದನೆ ಎಂದು ಘೋಷಿಸಿ ಎಂದಿನಂತೆ ಬಾಂಧವರಿಗೆ ಬಕೆಟ್ ಹಿಡಿಯಲು ಹೋಗಿದ್ದು ಕಾಂಗ್ರೆಸ್ ಪಕ್ಷ. ಒಂದು ವೇಳೆ ಸಾಧ್ವಿ ಹಾಗೂ ಪುರೋಹಿತ್ ರವರು ಬ್ಲಾಸ್ಟ್ ಮಾಡಿದ್ದೇ ಆದಲ್ಲಿ ಅದು ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಪ್ರತಿಭಟನೆಯಾಗಿಯೇ ವಿನಃ ನಿಮ್ಮ ಹಾಗೆ ಧರ್ಮ ಸ್ಥಾಪನೆಗಾಗಿ ಅಲ್ಲ” ಎಂದಿದ್ದು, ಭಯೋತ್ಪಾದನಾ ಕೃತ್ಯವನ್ನು ಸಮರ್ಥಿಸಿದ್ದಾರೆ.

ಅನುಪಮಾ ಶೆಣೈಯ ಈ ಪೋಸ್ಟ್ ವಿವಾದ ಸೃಷ್ಟಿಸಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚಿನ ಕೆಲ ದಿನಗಳಿಂದ ಅನುಪಮಾ ಶೆಣೈ ವಿವಾದಾತ್ಮಕ, ಕಾಂಗ್ರೆಸ್-ಜೆಡಿಎಸ್ ವಿರೋಧಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ತನ್ನ ಪೋಸ್ಟ್ ಗಳಲ್ಲಿ ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ. ಈ ಹಿಂದೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿ ವಿವಾದ ಸೃಷ್ಟಿಸಿದ್ದರು.

ಆದರೆ ಈ ಬಾರಿ ಅವರು ಭಯೋತ್ಪಾದನಾ ಕೃತ್ಯವನ್ನು ‘ಪ್ರತಿಭಟನೆ’ ಎಂದು ಹೇಳುವ ಮೂಲಕ ಸಮರ್ಥಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಅನುಪಮಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News