ಸ್ಕಾರ್ಫ್ ವಿವಾದ: ಮುಸ್ಲಿಂ ಸಂಘ ಸಂಸ್ಥೆಗಳ ಮುಖಂಡರ ಸಭೆ
ಮಂಗಳೂರು,ಎ.28: ನಗರದ ಪ್ರತಿಷ್ಟಿತ ಕಾಲೇಜೊಂದು ಮತ್ತೆ ಸ್ಕಾರ್ಫ಼್ ವಿವಾದವನ್ನು ಹುಟ್ಟುಹಾಕಿದ ಹಿನ್ನೆಲೆಯಲ್ಲಿ ಈ ಬಗ್ಗೆ ಸಮುದಾಯದ ನಿಲುವನ್ನು ಚರ್ಚಿಸಲು ಮತ್ತು ಇದಕ್ಕೆ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮುಸ್ಲಿಂ ಸಂಘ ಸಂಸ್ಥೆಗಳ ಮುಖಂಡರ ಸಭೆಯು ಇತ್ತೀಚೆಗೆ ರಫೀಉದ್ದೀನ್ ಕುದ್ರೋಳಿ ನೇತೃತ್ವದಲ್ಲಿ ನಗರದ ಲುಲು ಸೆಂಟರ್ ನ ದಾರುಲ್ ಇಲ್ಮ್ ನಲ್ಲಿ ನಡೆಯಿತು.
ಸಮುದಾಯದ ಸಂಘ ಸಂಸ್ಥೆಗಳ ಮುಖಂಡರುಗಳು ಭಾಗವಹಿಸಿದ ಈ ಸಭೆಯಲ್ಲಿ ಈ ವಿವಾದದ ಹಿನ್ನೆಲೆ, ಸಮುದಾಯದ ಒಟ್ಟು ಪ್ರತಿಕ್ರಿಯೆ, ಶೈಕ್ಷಣಿಕ ಇಲಾಖೆ ಮತ್ತು ಸರಕಾರದ ನಿರ್ಲಕ್ಷ್ಯ, ಮುಂದಿನ ನಡೆ ಮತ್ತು ಅದರ ಕಾರ್ಯಸೂಚಿ ಮುಂತಾದ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಸಮುದಾಯದ ಮುಂದಾಳು ಡಾ. ಕೆ.ಎಸ್. ಅಮೀರ್ ತುಂಬೆ, ಉದ್ಯಮಿ ಹಾಗೂ ಕೃಷ್ಣಾಪುರ ಬದ್ರಿಯಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮುಮ್ತಾಝ್ ಅಲಿ, ದ.ಕ. ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷ ಮುಸ್ತಫ಼ಾ ಕೆಂಪಿ, ಮಾಜಿ ನಗರಸಭಾ ಸದಸ್ಯ ಝಾಕಿರ್ ಹುಸೈನ್ ಉಳ್ಳಾಲ್, ಮಂಗಳೂರು ಸೆಂಟ್ರಲ್ ಕಮಿಟಿ ಮತ್ತು ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್, ಮೂವ್ ಮೆಂಟ್ ಫ಼ಾರ್ ಜಸ್ಟಿಸ್ ನ ಸಮೀರ್ ಶೇಖ್, ಸಾಮಾಜಿಕ ಕಾರ್ಯಕರ್ತ ಇರ್ಶಾದ್ ಯು.ಟಿ. ಉಪ್ಪಿನಂಗಡಿ, ಡೈಮಂಡ್ ಶಾಲೆಯ ಆಡಳಿತಾಧಿಕಾರಿ ಮುಹಮ್ಮದ್ ರಿಝ್ವಾನ್, ಕ್ಯಾಂಪಸ್ ಫ಼್ರಂಟ್ ನ ಶಾಕಿರ್ ಮತ್ತು ಇಮ್ರಾನ್ ಪಿ.ಜೆ. , ಯುನಿವೆಫ಼್ ಕರ್ನಾಟಕದ ಯು,ಕೆ. ಖಾಲಿದ್ ಮತ್ತು ಬಿ.ಎಂ. ಬದ್ರುದ್ದೀನ್ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯ ನಿರ್ಣಯಗಳು:
►ಪದೇ ಪದೇ ಉದ್ಭವಿಸುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
►ಧಾರ್ಮಿಕ ಆಚರಣೆಗಳಲ್ಲಿ ವಿದ್ಯಾಸಂಸ್ಥೆಗಳು ಹಸ್ತಕ್ಷೇಪ ನಡೆಸದಂತೆ ಶಿಕ್ಷಣ ಇಲಾಖೆ ಮತ್ತು ಸರಕಾರವನ್ನು ಒತ್ತಾಯಿಸಬೇಕು.
►ಸಮುದಾಯದ ಜನರಲ್ಲಿ ಮತ್ತು ವಿದ್ಯಾರ್ಥಿನಿಯರಲ್ಲಿ ಇಸ್ಲಾಮೀ ಶಿಷ್ಟಾಚಾರಗಳ ಕುರಿತು ಜಾಗೃತಿ ಮೂಡಿಸಬೇಕು.
►ಈ ನಿಟ್ಟಿನಲ್ಲಿ ಸಮುದಾಯದ ಖಾಝಿಗಳು, ಉಲೆಮಾಗಳು ಮಧ್ಯಪ್ರವೇಶಿಸುವಂತೆ ಮಾಡಿ ಜನಸಾಮಾನ್ಯರಲ್ಲಿ ಭದ್ರತೆಯ ಭಾವನೆ ಮೂಡಿಸಬೇಕು.
►ಈ ರೀತಿ ಇಸ್ಲಾಮೀ ಆಚಾರಗಳನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳುವ ವಿದ್ಯಾಸಂಸ್ಥೆಗಳು ಮುಖ್ಯಸ್ಥರನ್ನು ಭೇಟಿ ಮಾಡಿ ಅವರಿಗೆ ಇಸ್ಲಾಮೀ ಶಿಷ್ಟಾಚಾರಗಳ ಮಹತ್ವವನ್ನು ಮನಗಾಣಿಸಬೇಕು.
► ಭಾರತದಲ್ಲಿ ಸಿಖ್ ಮತ್ತು ಕ್ರಿಶ್ಚಿಯನ್ ಸನ್ಯಾಸಿ ಸನ್ಯಾಸಿನಿಯರಿಗೆ ಸಿಗುವ ವಿಶೇಷ ಸೌಲಭ್ಯಗಳು ಸಾಂವಿಧಾನಿಕವಾಗಿ ಮುಸ್ಲಿಮ್ ಪುರುಷ ಮತ್ತು ಮಹಿಳೆಯರಿಗೂ ದೊರಕಬೇಕು.
►ಸಂವಿಧಾನದಲ್ಲಿ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸಲು ಮುಕ್ತ ಅವಕಾಶ ದೊರಕಬೇಕು.
►ಸಾಂವಿಧಾನಿಕ ರೀತಿಯಲ್ಲಿ ನಮ್ಮ ಬೇಡಿಕೆಗಳನ್ನು ಪೂರೈಸಲು ಪ್ರಯತ್ನಿಸಬೇಕು.
ಈ ನಿಟ್ಟಿನಲ್ಲಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದ ರಫೀಉದ್ದೀನ್ ಕುದ್ರೋಳಿಯವರ ಸಲಹೆಯಂತೆ ಮುಸ್ಲಿಮ್ ಡೆವಲಪ್ ಮೆಂಟ್ ಸಮಿತಿ ( ಎಂ.ಡಿ.ಸಿ )ಎಂಬ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಲಾಯಿತು. 20 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಿ ಅದಕ್ಕೆ ಡಾ. ಅಮೀರ್ ತುಂಬೆಯವರನ್ನು ಸಂಚಾಲಕರನ್ನಾಗಿಯೂ ಯು.ಕೆ. ಖಾಲಿದ್ ರವರನ್ನು
ಸಹಸಂಚಾಲಕರನ್ನಾಗಿಯೂ ಸರ್ವಾನುಮತದಿಂದ ನೇಮಿಸಲಾಯಿತು.
ಎಪ್ರಿಲ್ 29 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ಸೇರಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಬೇಕೆಂದು ತೀರ್ಮಾನಿಸಲಾಯಿತು