ಹೆಬ್ಬಾವಿನ 25 ಮೊಟ್ಟೆ ರಕ್ಷಿಸಿದ ಮಂಗಳೂರಿನ ತೌಸೀಫ್
ಮಂಗಳೂರು, ಎ.28: ಕುಳಾಯಿಯ ಕೋಡಿಕೆರೆಯಲ್ಲಿದ್ದ 25 ಹೆಬ್ಬಾವಿನ ಮೊಟ್ಟೆಗಳನ್ನು ಯುವಕ ತೌಸಿಫ್ ಅಹ್ಮದ್ ಶನಿವಾರ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
‘ಕೋಡಿಕೆರೆಯ ರೈಲುಹಳಿ ಪಕ್ಕದಲ್ಲಿ ರೈಲ್ವೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಜೆಸಿಬಿಯಿಂದ ಕಲ್ಲನ್ನು ಸರಿಸುವಾಗ ಹೆಬ್ಬಾವು ಓಡಿ ಹೋಗಿದೆ. ಅದೇ ಜಾಗದಲ್ಲಿ ಹೆಬ್ಬಾವಿನ 25 ಮೊಟ್ಟೆಗಳನ್ನು ನೋಡಿ ರೈಲ್ವೆ ಕಾರ್ಮಿಕರು ದಿಗ್ಭ್ರಮೆಗೊಂಡಿದ್ದಾರೆ. ಬಳಿಕ ಮೊಟ್ಟೆಗಳನ್ನು ಕಾರ್ಮಿಕರು ಬಿಸಾಡಿ ಪ್ರಮಾದ ಎಸಗಿದ್ದಾರೆ. ರೈಲುಹಳಿ ಪಕ್ಕದ ಮಹಿಳೆಯರು ನನಗೆ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ತೆರಳಿ ಹೆಬ್ಬಾವಿನ ಮೊಟ್ಟೆ ರಕ್ಷಿಸಿದೆ’ ಎಂದು ತೌಸಿಫ್ ಅಹ್ಮದ್ ತಿಳಿಸಿದ್ದಾರೆ.
‘25 ಮೊಟ್ಟೆಗಳ ಪೈಕಿ ಒಂದು ಮೊಟ್ಟೆ ಸಂಪೂರ್ಣ ಹಾನಿಯಾಗಿದ್ದರೆ ಮತ್ತೊಂದು ಮೊಟ್ಟೆ ಭಾಗಶಃ ಹಾನಿಯಾಗಿತ್ತು. ಉಳಿದ 23 ಮೊಟ್ಟೆಗಳು ಸಹಜಸ್ಥಿತಿಯಲ್ಲಿದ್ದವು. ಅವುಗಳನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಸಂಗ್ರಹಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ’ ಎಂದು ಅವರು ಹೇಳಿದರು.
‘ಹೆಬ್ಬಾವುಗಳು ಸಾಮಾನ್ಯವಾಗಿ ಎರಡು ತಿಂಗಳುಗಳ ಕಾಲ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳನ್ನಾಗಿಸುತ್ತವೆ. ಇಲ್ಲಿಯೂ ಮೊಟ್ಟೆಗಳು ಸಾಧಾರಣವಾಗಿ ಇದೇ ವಾರದಲ್ಲಿ ಒಡೆದು ಮರಿಗಳಾಗುವ ಸಾಧ್ಯತೆಯಿದೆ. ಮೊಟ್ಟೆಗಳನ್ನು ಬಾಕ್ಸ್‌ನಲ್ಲಿ ಕೃತಕ ಬೆಳಕಿನ ಸಹಾಯದಿಂದ ಮರಿಗಳನ್ನಾಗಿಸಲಾಗುತ್ತದೆ. ಮೊಟ್ಟೆಗಳು ತೆರೆದ ವಾತಾರಣದಲ್ಲಿದ್ದರೆ ಮೊಟ್ಟೆಯೊಳಗಿನ ಭ್ರೂಣ ಸತ್ತು ಹೋಗುವ ಸಾಧ್ಯತೆ ಇರುತ್ತದೆ ಎಂದರು.
ಹೆಬ್ಬಾವಿನ ಮೊಟ್ಟೆಗಳನ್ನು ತೌಸಿಫ್ ಅಹ್ಮದ್ ಎಂಬವರು ರಕ್ಷಿಸಿದ್ದು, ಅವುಗಳನ್ನು ಪಿಲುಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸಲಾಗಿದೆ. ವಾರದಲ್ಲೇ ಮೊಟ್ಟೆಗಳು ಒಡೆದು ಮರಿಗಳಾಗುವ ಸಾಧ್ಯತೆಯಿದೆ.
- ಶ್ರೀಧರ್,ಮಂಗಳೂರು ವಲಯ ಅರಣ್ಯಾಧಿಕಾರಿ