ಉಡುಪಿ ಜಿಲ್ಲೆಯ 6 ತೋಟಗಾರಿಕಾ ಕ್ಷೇತ್ರಗಳ ಆದಾಯದಲ್ಲಿ ಏರಿಕೆ
ಉಡುಪಿ, ಎ.28: ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಆರು ತೋಟಗಾರಿಕೆ ಕ್ಷೇತ್ರಗಳಲ್ಲಿದ್ದು, ಅದರಲ್ಲಿ ಸಸಿ ಮಾರಾಟ ಮತ್ತು ಬೆಳೆಗಳ ಹಾರಾಜಿನಿಂದ ಉತ್ತಮ ಆದಾಯಗಳಿಸಲಾಗುತ್ತಿದೆ. ಈ ಮೂಲಕ ಇಲಾಖೆ ಆದಾಯ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯಲ್ಲಿ 2.48 ಎಕರೆ, ವಾರಂಬಳ್ಳಿಯಲ್ಲಿ 2.74 ಎಕರೆ, ಕುಂದಾಪುರದ ಕುಂಭಾಶಿಯಲ್ಲಿ 22.55 ಎಕರೆ, ಕೆದೂರಿನಲ್ಲಿ 13.62 ಎಕರೆ, ಕಾರ್ಕಳದ ಕುಕ್ಕಂದೂರಿನಲ್ಲಿ 15.19 ಎಕರೆ, ರಾಮಸಮುದ್ರದಲ್ಲಿ 196.97 ಎಕರೆ ತೋಟಗಾರಿಕೆ ಕ್ಷೇತ್ರಗಳಿವೆ.
ಈ ಆರು ಕ್ಷೇತ್ರಗಳಲ್ಲಿ 2018-19ನೆ ಸಾಲಿನಲ್ಲಿ 52.43 ಲಕ್ಷ ರೂ ಆದಾಯ ದೊರೆತಿದೆ. ದೊಡ್ಡಣಗುಡ್ಡೆ ಶಿವಳ್ಳಿಯಲ್ಲಿ 12.51 ಲಕ್ಷ ರೂ., ವಾರಂಬಳ್ಳಿಯಲ್ಲಿ 5.72 ಲಕ್ಷ ರೂ., ಕೆದೂರಿನಲ್ಲಿ 5.66 ಲಕ್ಷ ರೂ., ಕುಂಭಾಶಿಯಲ್ಲಿ 7.08 ಲಕ್ಷ ರೂ., ಕುಕ್ಕುಂದೂರಿನಲ್ಲಿ 9.45 ಲಕ್ಷ ರೂ., ರಾಮಸಮುದ್ರದಲ್ಲಿ 11.98 ಲಕ್ಷ ರೂ. ಆದಾಯ ಗಳಿಸಿದೆ. ಅದೇ ರೀತಿ 2016-17ರ ಸಾಲಿನಲ್ಲಿ 20 ಲಕ್ಷ ರೂ.,2017-18 ನೇ ಸಾಲಿನಲ್ಲಿ 37.49 ಲಕ್ಷ ರೂ ಆದಾಯ ಗಳಿಸಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ನಿದೀಶ್ ಹೊಳ್ಳ ತಿಳಿಸಿದ್ದಾರೆ.
ಗುರಿ ದಾಟಿದ ಬೆಳೆ ವಿಸ್ತರಣೆ
ಉಡುಪಿ ತೋಟಗಾರಿಕೆ ಇಲಾಖೆಯು ಗುರಿ ಮೀರಿದ ಸಾಧನೆ ಮಾಡಿದೆ. 500 ಹೆಕ್ಟರ್ ತೋಟಗಾರಿಕೆ ಬೆಳೆ ವಿಸ್ತರಣೆ ಗುರಿ ದಾಟಿ 711 ಹೆಕ್ಟೆರ್ ವಿಸ್ತರಣೆಯಾಗಿದೆ. ಸಮೃದ್ದ ತೋಟಗಾರಿಕೆ ವಲಯವಾಗಿ ಮಾವು, ತೆಂಗು, ಚಿಕ್ಕು, ಗೇರು, ತರಕಾರಿ ಸಸಿ, ವಾಣಿಜ್ಯ ಸಸಿಗಳ ಉತ್ಪಾದನೆ, ಫಾರ್ಮ್, ರೈತ ಸೇವಾ ಕೇಂದ್ರವನ್ನು ಹೊಂದಿದೆ.
ತೋಟಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರಿನ ಅಗತ್ಯತೆ ಇರುವುದರಿಂದ ಅಂತರ್ಜಲ ವೃದ್ದಿಗಾಗಿ ಆರು ತೋಟಗಾರಿಕೆ ಕ್ಷೇತ್ರಗಳಲ್ಲಿ ಮಳೆ ನೀರು ಕೊಯ್ಲು ಪದ್ದತಿ ಅಳವಡಿಸಲಾಗಿದೆ. ಈ ಮೂಲಕ ವರ್ಷದ ಎಲ್ಲ ದಿನಗಳಲ್ಲಿ ನೀರಿನ ವ್ಯವಸ್ಥೆಯನ್ನು ಎಲ್ಲ ಕ್ಷೇತ್ರಗಳಲ್ಲಿ ಕಲ್ಪಿಸಲಾಗಿದೆ.
ಸದ್ಯಕ್ಕೆ ಕಾರ್ಕಳ ರಾಮಸಮುದ್ರ ತೋಟಗಾರಿಕೆ ಕ್ಷೇತ್ರದಲ್ಲಿ ಯಾವುದೇ ನೀರಿನ ಸಮಸ್ಯೆ ಎದುರಾಗಿಲ್ಲ. ಶಿವಳ್ಳಿಯಲ್ಲಿ ಬೇಸಿಗೆ ನೀರು ಸಮಸ್ಯೆ ಉಂಟಾಗುತ್ತಿದ್ದು, ಇದರ ಪರಿಹಾರಕ್ಕಾಗಿ ಅಂತರ್ಜವೃದ್ದಿಗೆ 8.89 ಲಕ್ಷ ಲೀಟರ್ ಸಾಮರ್ಥ್ಯದ ಗುಂಡಿಯನು್ನ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ.
ತೋಟಗಾರಿಕೆ ಕ್ಷೇತ್ರಗಳಲ್ಲಿರುವ ಗೇರು, ಮಾವು, ಚಿಕ್ಕು, ತೆಂಗು, ರೈತ ಸೇವ ಕೇಂದ್ರದ ಚಟುವಟಿಕೆ, ಸಸಿಗಳ ಉತ್ಪಾದನೆ ಫಾರ್ಮ್, ನೆಟ್‌ಹೌಸ್ ಆಕರ್ಷಕ ವಾಗಿದೆ. ರಾಮಸಮುದ್ರ ತೋಟಗಾರಿಕೆ ಕ್ಷೇತ್ರದಲ್ಲಿ ಹೊಸದಾಗಿ 17 ಎಕರೆ ವಿಶಾಲವಾದ ಮಾವಿನ ತೋಪು ನಿರ್ಮಿಸಲಾಗಿದೆ. ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ನೆಟ್‌ಹೌಸ್‌ನಲ್ಲಿ ತರಕಾರಿ ಬೆಳೆಸುವುದು, ವಾರಂಬಳ್ಳಿಯಲ್ಲಿ ಕಾಳು ಮೆಣಸು, ತೆಂಗು ನರ್ಸರಿ, ಕುಂಭಾಶಿಯಲ್ಲಿ ತೆಂಗು, ಗೇರು ನರ್ಸರಿ, ಕೇದೂರು, ಕುಕ್ಕುಂದೂರಿನಲ್ಲಿ ವಾಣಿಜ್ಯ, ತೋಟಗಾರಿಕೆ ಬೆಳೆಯ ನರ್ಸರಿಗಳಿವೆ.
ಜಿಲ್ಲೆಯ ಎಲ್ಲ ತೊಟಗಾರಿಕಾ ಕ್ಷೇತ್ರಗಳಲ್ಲಿ ಸಸಿಗಳಿಗೆ ಸಾಕಷ್ಟು ಬೇಡಿಕೆ ಇದ್ದು, ವಾಣಿಜ್ಯ ಬೆಳೆ, ತರಕಾರಿ, ಅಲಂಕಾರಿಕ ಸಸಿಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ. ಹೊಸದಾಗಿ ರೈತರ ಬೇಡಿಕೆಗಳಿಗೆ ಅನುಸಾರವಾಗಿ ಕಸಿ ಕಾಳು ಮೆಣಸು ಉತ್ಪಾದನೆ ಮಾಡಲಾಗುತ್ತಿದೆ.
- ನಿದೀಶ್ ಹೊಳ್ಳ , ಸಹಾಯಕ ತೋಟಗಾರಿಕೆ ಅಧಿಕಾರಿ, ಉಡುಪಿ