×
Ad

ಮಲ್ಪೆ: ಹಲ್ಲೆಗೈದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ

Update: 2019-04-28 22:14 IST

ಮಲ್ಪೆ, ಎ.2: ಸಮುದ್ರ ದಡದಲ್ಲಿ ಮಲಗಿದ್ದ ಯುವಕನಿಗೆ ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ ಆರೋಪಿಯನ್ನು ದುಷ್ಕರ್ಮಿಗಳು ಅದೇ ದೊಣ್ಣೆಯಿಂದ ಹೊಡೆದು ಸಾಯಿಸಿದ ಘಟನೆ ಮಲ್ಪೆ ಕೊಳದ ವಿಠೋಭಾ ಭಜನಾ ಮಂದಿರದ ಬಳಿ ಶನಿವಾರ ಮಧ್ಯ ರಾತ್ರಿಯ ಬಳಿಕ ನಡೆದಿದೆ.

ಮೃತರನ್ನು ಹೈದರಾಬಾದ್ ನಿವಾಸಿ ಗುರುವೇಲು(35) ಎಂದು ಗುರುತಿಸಲಾಗಿದೆ. ಕೊಲೆಗೀಡಾದ ಗುರುವೇಲುವಿನಿಂದ ತೀವ್ರ ಹಲ್ಲೆಗೊಳಗಾದ ಮಲ್ಪೆ ಕೊಳ ನಿವಾಸಿ ಸುರೇಶ್ ಕರ್ಕೇರ ಎಂಬವರ ಪುತ್ರ ಅಮಿತ್(27) ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಎ.27ರಂದು ರಾತ್ರಿ 10:30ರ ಸುಮಾರಿಗೆ ಅಮಿತ್ ಹಾಗೂ ಕಾರ್ತಿಕ್ ಸಾಲ್ಯಾನ್ ಎಂಬವರು ಕೊಳದ ಹನುಮಾನ್ ವಿಠೋಭಾ ಭಜನಾ ಮಂದಿರದ ಎದುರು ಸಮುದ್ರದ ದಡದ ಕಲ್ಲುಗಳ ಬಳಿ ಮಲಗಿದ್ದರು. ಮಧ್ಯರಾತ್ರಿ 12:30ರ ಸುಮಾರಿಗೆ ಅಲ್ಲಿಗೆ ಬಂದ ಗುರುವೇಲು ಮರದ ಸೋಂಟೆಯಿಂದ ಅಮಿತ್ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ. ಬಳಿಕ ವಿಠೋಭಾ ಭಜನಾ ಮಂದಿರದ ಬಳಿ ಕೈಯಲ್ಲಿ ಸೋಂಟೆ ಹಿಡಿದು ನಿಂತಿದ್ದ ಗುರುವೇಲುವನ್ನು ಗಮನಿಸಿದ್ದ ಅಲ್ಲಿ ಸೇರಿದ್ದವರು ಸ್ವರಕ್ಷಣೆಗಾಗಿ ಆತನ ಕೈಯಿಂದ ಸೋಂಟೆಯನ್ನು ಕಸಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಇದರಿಂದ ಗಂಭೀರ ಗಾಯಗೊಂಡ ಗುರುವೇಲು ಮಧ್ಯರಾತ್ರಿ 1:10ರ ಸುಮಾರಿಗೆ ಕೊಳ ನಿವಾಸಿ ಗಿರೀಶ್ ಮೈಂದನ್ ಎಂಬವರ ಮನೆಯ ಬಾಗಿಲು ಬಡಿದಿದ್ದಾರೆ. ಅವರು ಹೊರಗಡೆ ಬಂದು ನೋಡಿದಾಗ ಗುರುವೇಲು ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿದ್ದು, ಅಲ್ಲೇ ಕೊನೆುಯುಸಿರೆಳೆದಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಗಿರೀಶ್ ಮೈಂದನ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಅದೇ ರೀತಿ ಗುರುವೇಲುವಿನಿಂದ ಹಲ್ಲೆಗೆ ಒಳಗಾದ ಅಮಿತ್ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ತನಿಖೆ ನಡೆಸುತ್ತಿದ್ದಾರೆ.

ಕೊಲೆಯ ಸುತ್ತ ಅನುಮಾನ
ಅಮಿತ್ ಕೊಲೆಯತ್ನ ಹಾಗೂ ಗುರುವೇಲು ಕೊಲೆಗೆ ನಿಖರವಾದ ಕಾರಣ ಏನು ಎಂಬುದು ಈವರೆಗೆ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News