×
Ad

ಕಲಿತ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೇ ಕಲ್ಯಾಣವಾದ ಎಂಸಿಎ ಪದವೀಧರೆ

Update: 2019-04-29 22:32 IST

ಪುತ್ತೂರು: ಮದುವೆಗೆ ದೊಡ್ಡ ಸಭಾಂಗಣ ಬೇಕು. ಅದ್ದೂರಿಯಾಗಿ ನಡೆಸಿದರೆ ಮಾತ್ರ ಗೌರವ ಸಿಗುವುದು ಹೀಗೆ ಹಲವು ಆಸೆಗಳು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಆದರೆ ತಾನು ಕಲಿತ ಸರ್ಕಾರಿ ಶಾಲೆಯಲ್ಲಿ ಸಪ್ತಪದಿ ತುಳಿದು ಇಲ್ಲೊಬ್ಬರು ಎಂಸಿಎ ಪದವೀಧರೆ ಎಲ್ಲರಿಗೂ ಮಾದರಿಯಾಗಿದ್ದಾರೆ.

ಪುತ್ತೂರು ತಾಲೂಕಿನ ನರಿಮೊಗರು ಎಂಬಲ್ಲಿನ ಯುವತಿ, ಸಾಮಾಜಿಕ ಕಾರ್ಯಕರ್ತೆ ಗುರುಪ್ರಿಯಾ ನಾಯಕ್ ಸರಳತೆಯೊಂದಿಗೆ, ಕಲಿತ ಶಾಲೆಯಲ್ಲಿ ವಿವಾಹವಾಗಿ ಮಾದರಿಯಾದ ಯುವತಿ.

ಪುತ್ತೂರು ತಾಲೂಕಿನ ನರಿಮೊಗರು ಸಮೀಪದ ಪುರುಷರಕಟ್ಟೆ ನಾಗೇಶ್ ನಾಯಕ್ ಮತ್ತು ವಿದ್ಯಾ ನಾಯಕ್ ದಂಪತಿಯ ಪುತ್ರಿ ಗುರುಪ್ರಿಯಾ ನಾಯಕ್ ಅವರು  ತಾನು ಪ್ರಾಥಮಿಕ ಶಿಕ್ಷಣ ಪಡೆದ  ನರಿಮೊಗರು ಸ.ಹಿ.ಪ್ರಾ.ಶಾಲೆಯಲ್ಲಿ ರವಿವಾರ ಪಾಣೆಮಂಗಳೂರಿನ ನರಸಿಂಹ ಕಾಮತ್ ಅವರ ಪುತ್ರ ಶಿವಾನಂದ್ ಅವರೊಂದಿಗೆ ಹಸೆಮನೆ ಏರಿದರು. ಮದುವೆಗಾಗಿ ಶಾಲೆಯನ್ನು ಕಲ್ಯಾಣ ಮಂಟಪವಾಗಿ ಶೃಂಗರಿಸಲಾಗಿತ್ತು.

ಗುರುಪ್ರಿಯ ನಾಯಕ್ ಅವರು ಕಲಾವಿದೆ. ಗಾಯಕಿ, ನೃತ್ಯಗಾರ್ತಿ, ಸಂಘಟಕಿ, ಸಮಾಜ ಕಾರ್ಯಕರ್ತೆ ಹೀಗೆ ಎಲ್ಲ ರಂಗದಲ್ಲೂ ತನ್ನನ್ನು ತೊಡಗಿಸಿ ಕೊಂಡವರಾಗಿದ್ದು, ಸ್ವಚ್ಚತಾ ಆಂದೋಲನದಲ್ಲಿ ಇತ್ತೀಚೆಗೆ ಸಾಕಷ್ಟು ಕೆಲಸ ಮಾಡಿದ್ದರು. ಉನ್ನತ ಶಿಕ್ಷಣ ಪಡೆದಿದ್ದರೂ ಊರಿಗಾಗಿ ಉತ್ತಮ ಕೆಲಸದ ಅವಕಾಶವನ್ನೂ ಬಿಟ್ಟು ನರಿಮೊಗರಿನಲ್ಲಿ ಸಂಘಟನೆಯನ್ನು ಕಟ್ಟಿಕೊಂಡು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದರು. ತನ್ನ ಎಲ್ಲಾ ಬೆಳವಣಿಗೆ ಮತ್ತು ಚಟುವಟಿಕೆಗೆ ಮೆಟ್ಟಿಲಾಗಿ ಇದ್ದದ್ದು ನರಿಮೊಗರು ಹಿ.ಪ್ರಾ.ಶಾಲೆ ಎಂದು ಹೇಳುವ ಗುರುಪ್ರಿಯಾ ಅವರು ತಾನು ಕಲಿತ ಶಾಲೆಯಲ್ಲೇ ಮದುವೆಯಾಗುವ ಇಚ್ಚೆ ಹೊಂದಿದ್ದರು. ಈ ಬಗ್ಗೆ ವಿನಂತಿಸಿದಾಗ ಶಾಲಾಭಿವೃದ್ದಿ ಸಮಿತಿಯವರೂ ಒಪ್ಪಿಗೆ ನೀಡಿದರು. 

ಅತ್ತ ವರನ ಕಡೆಯವರೂ ವಧುವಿನ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು. ಪುತ್ತೂರು ತಾಲೂಕು ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಗುರುಪ್ರಿಯಾ ನಾಯಕ್ ಅವರು ತಾನು ಕಟ್ಟಿದ ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ದಶಮಾನೋತ್ಸವವನ್ನೂ ಕೂಡ ತಾನು ಕಲಿತ ಶಾಲೆಯಲ್ಲೆ ಇತ್ತಿಚೆಗೆ ಆಚರಿಸಿದ್ದರು.

ನರಿಮೊಗರು ಪ್ರಾಥಮಿಕ ಶಾಲೆ ನನ್ನ ಪ್ರತಿಭೆ ಬೆಳಗಲು ಮೆಟ್ಟಿಲಾಗಿದೆ. ಶಾಲೆಯ ಮೇಲೆ ಅಪಾರ ಪ್ರೀತಿ, ಭಕ್ತಿ, ಗೌರವ. ಶಾಲೆಯೆಂದರೆ ಎಲ್ಲರನ್ನೂ ಬೆಳಗಿಸೋ ವಿದ್ಯಾ ದೇಗುಲ. ಈ ನಿಟ್ಟಿನಲ್ಲಿ ದೇವಸ್ಥಾನದ ಬದಲು ನನ್ನ ಶಾಲೆಯಲ್ಲೇ ಮದುವೆಯಾಗಲು ನಿರ್ಧರಿಸಿದೆ. ಎಲ್ಲರೂ ಒಪ್ಪಿಗೆ ಸೂಚಿಸಿದರು. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ ಎಂದು ಭಾವಿಸಿದ್ದೇನೆ.
-ಗುರುಪ್ರಿಯಾ ನಾಯಕ್ (ವಧು) 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News