×
Ad

ರೈಲಿನಲ್ಲಿ ಬೆಂಕಿ ದುರಂತ: ಸಂಭಾವ್ಯ ಅಪಾಯ ತಪ್ಪಿಸಿದ ಪುತ್ತೂರಿನ ಮಹಿಳೆ

Update: 2019-04-29 22:56 IST
ಜಲಜಾಕ್ಷಿ

ಪುತ್ತೂರು: ಹೊಸದಿಲ್ಲಿಯಿಂದ ಕೇರಳದ ಎರ್ನಾಕುಲಂಗೆ ತೆರಳುತ್ತಿದ್ದ ನಿಝಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನ ಬೋಗಿಯಲ್ಲಿ ಕಂಡು ಬಂದ ಬೆಂಕಿ ಆಕಸ್ಮಿಕತೆಯನ್ನು ಗಮನಿಸಿ, ಸಂಭಾವ್ಯ ಅನಾಹುತವನ್ನು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿಯ ಮಹಿಳೆಯೋರ್ವರು ತನ್ನ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾರೆ.

ನಿಝಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನ ಹವಾ ನಿಯಂತ್ರಿತ ಬೋಗಿಯಲ್ಲಿ ಶನಿವಾರ ತಡ ರಾತ್ರಿ ಉಂಟಾಗಿದ್ದ ಬೆಂಕಿ ಆಕಸ್ಮಿಕ ಘಟನೆಯನ್ನು ಗಮನಿಸಿ ಸಂಭವಿಸಬಹುದಾಗಿದ್ದ ದುರಂತವನ್ನು ಪುತ್ತೂರು ತಾಲೂಕಿನ ತಿಂಗಳಾಡಿಯ ಜಲಜಾಕ್ಷಿ ಮನೋಹರ್ ರೈ ಎಂಬವರು ತಪ್ಪಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

ಮುಂಬೈ ಇರೋಲ್‍ನಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ದ ಇವರು ಮಗಳು ಅಕ್ಷತಾ ರೈ, ಅಳಿಯ ನಿಶ್ಚಲ್ ಶೆಟ್ಟಿ ಪೆರ್ನೆ ಅಮೈ ಹಾಗೂ 8 ತಿಂಗಳ ಮಗುವಿನೊಂದಿಗೆ ಎ. 27 ರಂದು ರಾತ್ರಿ ಮುಂಬೈ ಪನ್ವೇಲ್ ರೈಲ್ವೇ ನಿಲ್ದಾಣದಿಂದ ಹೊರಟಿದ್ದು, ಹವಾ ನಿಯಂತ್ರಿತ ಬೋಗಿಯ ಬಿ4 ಸೀಟ್‍ನಲ್ಲಿ ಜಲಜಾಕ್ಷಿ ಅವರು ಹಾಗೂ ಬಿ 10 ರಲ್ಲಿ ಮಗಳು, ಅಳಿಯ ಹಾಗೂ 8 ತಿಂಗಳ ಮೊಮ್ಮಗ ಮಲಗಿದ್ದರು.

ಮಗುವನ್ನು ನೋಡಿಕೊಳ್ಳಲು ಮಗಳ ಮನೆಗೆ ಹೋಗಿದ್ದೆ. ರಾತ್ರಿ ರೈಲು ಸಮಯಕ್ಕೆ ಬಾರದೆ ತಡವಾಗಿತ್ತು. ಮೇಲಿನ ಸೀಟಿನಲ್ಲಿ ಮಲಗಿದ್ದ ನನಗೆ ನಿದ್ದೆ ಬಂದಿರಲಿಲ್ಲ. ಟಾಯ್ಲೆಟ್‍ನ ಪಕ್ಕದಲ್ಲೇ ನನಗೆ ಸೀಟು ಸಿಕ್ಕಿತ್ತು. ಟಾಯ್ಲೆಟ್ ಭಾಗದಿಂದ ಹೊಗೆ ಕಾಣಿಸಿಕೊಂಡಿತು. ವಾಸನೆಯೂ ಬಂತು. ಗಾಬರಿಯಾಯಿತು, ತಕ್ಷಣ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಬೊಬ್ಬೆ ಹಾಕಿಕೊಂಡು ಓಡಿಹೋಗಿ ಮಗಳ ಕಾಲನ್ನು ಎಳೆದೆ. ಬಳಿಕ ಮಗಳು, ಅಳಿಯ ಸೇರಿದಂತೆ ಬೋಗಿಯಲ್ಲಿದ್ದವರೆಲ್ಲಾ ಎದ್ದರು. ಬಳಿಕ ಅಳಿಯ ರೈಲಿನ ನಿಲ್ಲಿಸುವ ಚೈನ್ ಎಳೆದಿದ್ದಾರೆ. ರೈಲಿನಲ್ಲಿ ಪ್ರಯಾಣಿಸಿದ ಅನುಭವ ಕಡಿಮೆ ಇರುವುದರಿಂದ ವಿಪರೀತ ಭಯ ಆಗಿತ್ತು. ರೈಲು ನಿಲ್ಲಿಸಿದ ಬಳಿಕ ಜಲ್ಲಿಯ ರಾಶಿಗೆ ಹಾರಿ ಇಳಿದೆವು ಎಂದು ತನ್ನ ಭಯದ ಅನುಭವವನ್ನು ಜಲಜಾಕ್ಷಿ ಅವರು ಹಂಚಿಕೊಂಡಿದ್ದಾರೆ.

ಬೋಗಿಯಲ್ಲಿ ಎಲ್ಲಾ 72 ಸೀಟುಗಳೂ ಭರ್ತಿಯಾಗಿದ್ದವು. ಒಳ್ಳೆಯ ನಿದ್ದೆ ಬಂದಿತ್ತು. ಅತ್ತೆ ಬೊಬ್ಬೆ ಹಾಕಿಕೊಂಡು ಬಂದು ಎಬ್ಬಿಸಿದಾಗ ಏನೆಂದೂ ಗೊತ್ತಾಗಲಿಲ್ಲ. ರೈಲಿನಲ್ಲಿ ಮಲಯಾಳಂ ಹಾಗೂ ಹಿಂದಿ ಭಾಷಿಗರೇ ಇದ್ದುದರಿಂದ ಅತ್ತೆ ಫಯರ್, ಡೇಂಜರ್ ಎಂದು ಬೊಬ್ಬೆ ಹಾಕುತ್ತಿದ್ದರು. ಅನಂತರ ಹೊಗೆ ಕಂಡು ಓಡಿದೆವು. ಕೂಡಲೇ ತುರ್ತು ನಿಲುಗಡೆ ಚೈನ್ ಎಳೆದೆ. ಟಾಯ್ಲೆಟ್ ಭಾಗದಲ್ಲಿ ಇಳಿಯಲು ಸಾಧ್ಯವಿರದಿದ್ದರಿಂದ ರೈಲು ನಿಂತ ಕೂಡಲೇ ವಿರುದ್ಧ ದಿಕ್ಕಿನಲ್ಲಿ ಎಲ್ಲರನ್ನೂ ಕರೆದುಕೊಂಡು ಓಡಿದೆವು. ಒಂದು ಐದು ನಿಮಿಷ ವ್ಯತ್ಯಾಸವಾಗಿದ್ದರೆ ಎಲ್ಲವೂ ಹೊತ್ತಿ ಉರಿಯುತ್ತಿತ್ತು. ಎಚ್ಚರಗೊಂಡು ಹೊಗೆ ನೋಡಿದಾಗ ರೈಲು ವೇಗದಲ್ಲಿ ಸಾಗುತ್ತಿತ್ತು. ಬಿಜೂರು ರೈಲ್ವೇ ನಿಲ್ದಾಣ ಕಳೆದು ಸುಮಾರು 2 ಕಿ.ಮೀ. ಮುಂದಕ್ಕೆ ಈ ಘಟನೆ ನಡೆದಿದೆ. ಆಗ ಮಧ್ಯ ರಾತ್ರಿ 1.20 ರಿಂದ 1.45 ರ ಸಮಯವಾಗಿತ್ತು. ಪುಣ್ಯಕ್ಕೆ ರೈಲು ನಿಂತ ಜಾಗದಲ್ಲಿಯೇ ಎರಡು ಮನೆಯಿತ್ತು. ಆ ಮನೆಯವರು ತಕ್ಷಣ ಪೈಪ್ ಹಾಕಿ ಪಂಪ್ ಚಾಲು ಮಾಡಿ ಬೆಂಕಿ ನಂದಿಸಲು ಸಹಕಾರ ನೀಡಿದರು. ಆ ಜಾಗವನ್ನು ಹೊರತುಪಡಿಸಿ ಬೇರೆ ಮನೆಗಳಿಲ್ಲ ಎಂದು ಅವರು ಹೇಳುತ್ತಿದ್ದರು. ಸುಮಾರು 2 ಗಂಟೆಗಳ ಕಾಲ ರೈಲನ್ನು ಅಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಮತ್ತೆ ಬಿಜೂರು ರೈಲ್ವೇ ನಿಲ್ದಾಣಕ್ಕೆ ಬಂದು ಸುಟ್ಟ ಬೋಗಿಯನ್ನು ಬದಲಾಯಿಸಿ ಮಂಗಳೂರು ಕಡೆಗೆ ಬಂದಾಗ ನಾವು ಮಂಗಳೂರಿನಲ್ಲಿ ಇಳಿದೆವು ಎಂದು ನಿಶ್ಚಲ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News