ಬಾಂಬ್‌ಗಳಲ್ಲಿ ಸುಲಭ-ಲಭ್ಯ ರಾಸಾಯನಿಕ ಬಳಕೆ

Update: 2019-04-30 15:05 GMT

ಕೊಲಂಬೊ, ಎ. 30: ಈಸ್ಟರ್ ರವಿವಾರದಂದು ನಡೆದ ಸರಣಿ ಬಾಂಬ್ ಸ್ಫೋಟಗಳ ಆತ್ಮಹತ್ಯಾ ಬಾಂಬರ್‌ಗಳು ಬಾಂಬ್‌ಗಳನ್ನು ತಯಾರಿಸಲು ಸುಲಭವಾಗಿ ಸಿಗುವ ರಾಸಾಯನಿಕಗಳನ್ನು ಬಳಸಿದ್ದರು ಎಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಹೇಳಿದ್ದಾರೆ.

ಭಯೋತ್ಪಾದಕರು ಬಾಂಬ್ ತಯಾರಿಕೆಯ ತಾಂತ್ರಿಕ ಜ್ಞಾನವನ್ನು ಹೇಗೆ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಚರ್ಚ್‌ಗಳು ಮತ್ತು ವಿಲಾಸಿ ಹೊಟೇಲ್‌ಗಳಲ್ಲಿ ನಡೆದ ಸ್ಫೋಟಗಳಲ್ಲಿ ಬಳಸಲಾದ ಬಾಂಬ್‌ಗಳಲ್ಲಿ ಬಳಸಲಾದ ಸ್ಫೋಟಕಗಳ ಮೂಲವನ್ನು ತನಿಖಾಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ ಎಂದು ವಿಕ್ರಮೆಸಿಂಘೆ ತಿಳಿಸಿದರು.

‘‘ಭಯೋತ್ಪಾದಕ ಚಟುವಟಿಕೆಗಳಿಗೆ ಯಾರು ಹಣ ನೀಡಿದರು ಮತ್ತು ಬಾಂಬ್ ತಯಾರಿಕೆ ತಂತ್ರಜ್ಞಾನ ಅವರಿಗೆ ಎಲ್ಲಿಂದ ಬಂತು ಎಂಬ ಪ್ರಶ್ನೆಗಳಿಗೆ ನಾವು ಈಗ ಉತ್ತರ ಹುಡುಕುತ್ತಿದ್ದೇವೆ. ಸ್ಫೋಟದಲ್ಲಿ ಬಳಸಲಾದ ಸ್ಫೋಟಕಗಳು ನಿರ್ದಿಷ್ಟ ಹವಾಮಾನ ಮತ್ತು ನಿರ್ದಿಷ್ಟ ಉಷ್ಣತೆಗಳಲ್ಲಿ ಇಡಬೇಕಾದ ಸಾಮಗ್ರಿಗಳಾಗಿದ್ದವು’’ ಎಂದರು.

ಭಯೋತ್ಪಾದಕರು ಶ್ರೀಮಂತ ಕುಟುಂಬಗಳಿಂದ ಬಂದಿರುವ ಹಿನ್ನೆಲೆಯಲ್ಲಿ, ತಮ್ಮ ಭಯೋತ್ಪಾದಕ ಕೃತ್ಯಗಳಿಗೆ ಅವರೇ ಹಣ ಹಾಕಿರಬಹುದು ಎಂಬುದಾಗಿ ವಿಕ್ರಮೆಸಿಂಘೆ ಅಭಿಪ್ರಾಯಪಟ್ಟರು.

ಆದಾಗ್ಯೂ, ಭಯೋತ್ಪಾದಕರಿಗೆ ವಿದೇಶಿ ಸಂಘಟನೆಗಳು ಹಣಕಾಸು ನೆರವು ನೀಡಿವೆಯೇ ಎಂಬ ಬಗ್ಗೆ ಗುಪ್ತಚರ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದರು.

ಎಪ್ರಿಲ್ 21ರಂದು ಶ್ರೀಲಂಕಾದ ಚರ್ಚ್‌ಗಳು ಮತ್ತು ವಿಲಾಸಿ ಹೊಟೇಲ್‌ಗಳಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 253 ಮಂದಿ ಮೃತಪಟ್ಟಿದ್ದಾರೆ.

► ಹೊಸ ದಾಳಿಗೆ ಉಗ್ರರಿಂದ ಸಂಚು: ಅಮೆರಿಕ ರಾಯಭಾರಿ ಎಚ್ಚರಿಕೆ

ಈಸ್ಟರ್ ರವಿವಾರದ ಭಯೋತ್ಪಾದಕ ದಾಳಿಯಲ್ಲಿ ಭಾಗವಹಿಸಿದ್ದ ಕೆಲವು ಐಸಿಸ್ ಭಯೋತ್ಪಾದಕರು ಈಗಲೂ ಹೊರಗಿರುವ ಸಾಧ್ಯತೆಯಿದೆ ಹಾಗೂ ಅವರು ಹೊಸ ದಾಳಿಗಳಿಗೆ ಯೋಜನೆ ರೂಪಿಸುತ್ತಿರುಬಹುದು ಎಂದು ಶ್ರೀಲಂಕಾಗೆ ಅಮೆರಿಕದ ರಾಯಭಾರಿ ಅಲೈನಾ ಟೆಪ್ಲಿಟ್ಝ್ ಮಂಗಳವಾರ ಹೇಳಿದ್ದಾರೆ.

ಪವಿತ್ರ ಇಸ್ಲಾಮಿಕ್ ತಿಂಗಳು ರಮಝಾನ್ ಆರಂಭಕ್ಕೆ ಮೊದಲು ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ, ಶ್ರೀಲಂಕಾದ ಭದ್ರತಾ ಪಡೆಗಳು ದೇಶಾದ್ಯಂತ ಭಾರೀ ಬಂದೋಬಸ್ತ್ ಏರ್ಪಡಿಸಿವೆ.

‘‘ಸಂಚುಕೋರರನ್ನು ಬಂಧಿಸುವ ನಿಟ್ಟಿನಲ್ಲಿ ಅಮೋಘ ಪ್ರಗತಿಯನ್ನು ಸಾಧಿಸಲಾಗಿದೆ. ಆದರೆ, ಅದನ್ನು ಈಗಾಗಲೇ ಸಾಧಿಸಲಾಗಿದೆ ಎಂದು ನಾನು ಭಾವಿಸುವುದಿಲ್ಲ’’ ಎಂದು ಸಂದರ್ಶನವೊಂದರಲ್ಲಿ ರಾಯಭಾರಿ ಅಲೈನಾ ಹೇಳಿದರು.

‘‘ಇನ್ನಷ್ಟು ದಾಳಿಗಳಿಗಾಗಿ ಸಂಚುಗಳು ನಡೆಯುತ್ತಿವೆ ಎಂದು ನಾವು ಭಾವಿಸಿದ್ದೇವೆ’’ ಎಂದರು.

► ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ತೆರವು

ಈಸ್ಟರ್ ರವಿವಾರದ ಭಯೋತ್ಪಾದಕ ದಾಳಿಗಳ ಬಳಿಕ, ವದಂತಿಗಳ ಪ್ರಸಾರವನ್ನು ನಿಲ್ಲಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಶ್ರೀಲಂಕಾ ಸರಕಾರ ತೆರವುಗೊಳಿಸಿದೆ ಎಂದು ಅಧ್ಯಕ್ಷರ ಕಚೇರಿಯ ಮೂಲವೊಂದು ಮಂಗಳವಾರ ತಿಳಿಸಿದೆ.

ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ವೈಬರ್ ಮುಂತಾದ ಸಾಮಾಜಿಕ ಮಾಧ್ಯಮಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಲಾಗಿದೆ ಎಂದು ಮೂಲವನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News