ಎಸೆಸೆಲ್ಸಿ ಫಲಿತಾಂಶ: ಎಂಡೋಸಲ್ಫಾನ್ ಪೀಡಿತ ವಿದ್ಯಾರ್ಥಿಗಳ ಸಾಧನೆ

Update: 2019-04-30 17:23 GMT

ಮಂಗಳೂರು, ಎ.30: ಕೊಯ್ಲದ ಎಂಡೋಸಲ್ಫಾನ್ ಕೇಂದ್ರದಲ್ಲಿರುವ ಇಬ್ಬರು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಭಾಸ್ಕರ್ ಗೌಡ ಮತ್ತು ರೇವತಿ ದಂಪತಿಯ ಪುತ್ರ ಮನೋಜ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 64 ಶೇ. ಅಂಕ ಗಳಿಕೆಯೊಂದಿಗೆ ಉತ್ತೀರ್ಣರಾಗಿದ್ದಾರೆ. 85 ಶೇ. ವಿಕಲಚೇತನರಾಗಿರುವ ಮನೋಜ್ ಅವರು ಮಯೂರ್ ಎಂಬವರ ಸಹಾಯದೊಂದಿಗೆ ಪರೀಕ್ಷೆ ಬರೆದಿದ್ದರು. ಇಷ್ಟೇ ಅಲ್ಲದೆ ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೊಳಗಾದರೂ ಮನೋಜ್ ಯಾವುದೇ ಪರೀಕ್ಷೆ ಬರೆಯುವುದರಿಂದ ಹಿಂದೆ ಸರಿಯಲಿಲ್ಲ. ತನ್ನ ಹೆತ್ತವರನ್ನು ಸಲಹುವುದಕ್ಕಾಗಿ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಗುರಿಯನ್ನು ಮನೋಜ್ ಹೊಂದಿದ್ದಾರೆ.

ಇದೇ ಎಂಡೋಸಲ್ಫಾನ್ ಕೇಂದ್ರದ ಮತ್ತೊಬ್ಬ ವಿದ್ಯಾರ್ಥಿನಿ ರೇವತಿ 44 ಶೇ. ಅಂಕ ಗಳಿಸುವ ಮೂಲಕ ಉತ್ತೀರ್ಣರಾಗಿದ್ದಾರೆ. ಬಾಬು ಮೊಗೇರ ಮತ್ತು ಲೀಲಾ ದಂಪತಿಯ ಪುತ್ರಿಯಾಗಿರುವ ರೇವತಿ ಪರೀಕ್ಷೆ ಬರೆಯಲು ಲಿಖಿತಾ ಎಂಬವರು ನೆರವಾಗಿದ್ದರು.

ಮನೋಜ್ ಮತ್ತು ರೇವತಿ ಇಬ್ಬರೂ ಉಪ್ಪಿನಂಗಡಿಯ ಸರಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಯುವುದೆಂದು ನಿರ್ಧರಿಸಲಾಗಿತ್ತು. ಆದರೆ ಡಿಡಿಪಿಐ ವೈ. ಶಿವರಾಮಯ್ಯ ಮಧ್ಯಪ್ರವೇಶಿಸಿ ರಾಮಕುಂಜದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರು. ರಾಮಕುಂಜ ಶಾಲೆ ಕೊಯ್ಲ ಎಂಡೋಸಲ್ಫಾನ್ ಕೇಂದ್ರಕ್ಕೆ ಸಮೀಪದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News