×
Ad

ಸಾಯಿರಾಧಾ ರಿಸಾರ್ಟ್‌ಗೆ ಹೆಚ್ಚಿದ ಭದ್ರತೆ

Update: 2019-04-30 23:01 IST

ಉಡುಪಿ, ಎ.30: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಂಚಕರ್ಮ ಚಿಕಿತ್ಸೆಯೂ ಸೇರಿದಂತೆ ವಿವಿಧ ಆಯುರ್ವೇದ ಚಿಕಿತ್ಸೆಗಳನ್ನು ಪಡೆಯುತ್ತಿರುವ ಕಾಪು ಸಮೀಪದ ಮೂಳೂರಿನ ಸಾಯಿರಾಧಾ ಹೆಲ್ತ್ ರೆಸಾರ್ಟ್‌ಗೆ ಒದಗಿಸಲಾದ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮುಖ್ಯಮಂತ್ರಿಗಳು ಚಿಕಿತ್ಸೆ ಪಡೆಯುತ್ತಿರುವ ರೆಸಾರ್ಟ್ ಹಾಗೂ ಬೀಚ್‌ನ ಆವರಣ ಕಾಣಿಸದಂತೆ ಸುತ್ತಲೂ ಹಸಿರು ಬಣ್ಣದ ಪರದೆಯನ್ನು ಎಳೆಯಲಾ ಗಿದೆ. ಹೀಗಾಗಿ ಸಮೀಪದ ರಸ್ತೆಯಿಂದ ಈಗ ಅಲ್ಲಿ ನಡೆಯುವ ಯಾವುದೇ ಚಟುವಟಿಕೆಗಳು ಮಾಧ್ಯಮಕ್ಕೆ ಕಾಣಿಸದಂತಾಗಿದೆ.
ಸೋಮವಾರದಂದು ಜೆಡಿಎಸ್ ನಾಯಕರಾದ ಸಚಿವ ಸಾ.ರಾ.ಮಹೇಶ್ ಹಾಗೂ ಎಚ್.ಎಲ್.ಬೋಜೇಗೌಡರ ಕೆಲವು ಚಟುವಟಿಕೆಗಳು ಮಾಧ್ಯಮಗಳ ಕೆಮರಾ ಕಣ್ಣಿನಲ್ಲಿ ಸೆರೆಯಾಗಿದ್ದವು.

ರೆಸಾರ್ಟ್‌ಗೆ ಪಕ್ಕದ ಮೀನುಗಾರಿಕಾ ರಸ್ತೆಗೂ ಬ್ಯಾರಿಕೇಡ್ ಅಳವಡಿಸುವ ಮೂಲಕ ಜನರ ಸಂಚಾರಕ್ಕೂ ನಿರ್ಬಂಧ ಹೇರಲಾಗಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ವರದಿ ಬರುತಿದ್ದಂತೆ ಮೀನುಗಾರಿಕಾ ರಸ್ತೆಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಮುಖ್ಯಮಂತ್ರಿಗಳು ಪೊಲೀಸರಿಗೆ ಸೂಚನೆಗಳನ್ನು ನೀಡಿದರು.

ಅಲ್ಲದೇ ರೆಸಾರ್ಟ್ ಎದುರಿನ ಮೂಳೂರು ಬೀಚ್ ಉದ್ದಕ್ಕೂ ಪೊಲೀಸ್ ಕಾವಲು ಹಾಕಲಾಯಿತು. ನಿನ್ನೆಯಂತೆ ಇಂದು ಸಹ ಸಚಿವ ಸಾ.ರಾ. ಮಹೇಶ್ ಹಾಗೂ ಬೋಜೇಗೌಡರು ಸಮುದ್ರ ಕಿನಾರೆಯಲ್ಲಿ ಕೆಲ ಕಾಲ ಕಳೆದರು. ಸಚಿವರು ಮೂಳೂರು ಬೀಚ್‌ನಿಂದ ಕಾಪು ದೀಪಸ್ತಂಭದವರೆಗೆ 3-4ಕಿ.ಮೀ. ವಾಕಿಂಗ್ ಮಾಡಿದರು.

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡ ಅವರು ರಿಸಾರ್ಟ್‌ನಿಂದ ಹೊರಬರಲಿಲ್ಲ. ಡಾ.ತನ್ಮಯ ಗೋಸ್ವಾಮಿ ನೇತೃತ್ವದ ಆಯುರ್ವೇದ ವೈದ್ಯರ ತಂಡ ಅವರಿಗೆ ಮಸಾಜ್, ಪಂಚಕರ್ಮ ಸೇರಿದಂತೆ ವಿವಿಧ ಚಿಕಿತ್ಸೆ ನೀಡುತ್ತಿದೆ.

ಮುಖ್ಯಮಂತ್ರಿ ಸೇರಿದಂತೆ ಜೆಡಿಎಸ್ ಹಿರಿಯ ನಾಯಕರು ಸಾಯಿರಾಧ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವುದರಿಂದ ಇದೀಗ ಆಸುಪಾಸಿನ ಬೀಚ್ ಶುಚಿತ್ವದ ಕಡೆ ಹೆಚ್ಚಿನ ಗಮನ ಹರಿಸಲಾಗಿದೆ. ರೆಸಾರ್ಟ್ ಸಿಬ್ಬಂದಿಯಿಂದ ಬೀಚ್ ಕ್ಲೀನಿಂಗ್ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News