ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ: ರಾಜ್ಯ ಮಟ್ಟದಲ್ಲಿ 2ನೆ ಸ್ಥಾನ
ಬಂಟ್ವಾಳ, ಎ. 30: ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಇತಿಹಾಸದಲ್ಲಿ ಈ ಬಾರಿಯ ಎಸೆಸೆಲ್ಸಿ ಫಲಿತಾಂಶ ಮೈಲುಗಲ್ಲಾಗಿದೆ. ಪ್ರಥಮ ಬಾರಿಗೆ ಶಾಲೆ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ವಿಠಲ ಜೇಸಿಸ್ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಎಲ್. ಎನ್. ಕೂಡೂರು ಹೇಳಿದ್ದಾರೆ.
ಶಾಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಟ್ಲ ಬಸವನಗುಡಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಯೋಜಿಸಲಾಗಿದೆ. 40ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಮಾಡುವ ಉದ್ದೇಶ ಹೊಂದಲಾಗಿದೆ. ಆಸುಪಾಸಿನಲ್ಲಿ ಪ್ರಥಮ ಬಾರಿಗೆ ಎಂಬಂತೆ 65 ಇಂಚು ಡಿಜಿಟಲ್ ಡಿಸ್ ಪ್ಲೇ ಸಿಸ್ಟಮ್ ವಿದ್ ಟಚ್ ಸ್ಕ್ರೀನ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯದ ನಿಟ್ಟಿನಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕಟ್ಟಡದಲ್ಲಿ ಮಾರ್ಪಾಡು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾಂಶುಪಾಲ ಜಯರಾಮ ರೈ ಮಾತನಾಡಿ, ಶಾಲೆಯಿಂದ 16ನೆ ಬ್ಯಾಚ್ ಹೊರಹೋಗುತ್ತಿದ್ದು, ನಿರಂತರ ಶೇ.100 ಫಲಿತಾಂಶವನ್ನು ದಾಖಲಿಸುತ್ತಾ ಎಲ್ಲ ಕಡೆ ಗುರುತಿಸಲ್ಪಡುತ್ತಿದೆ. ಕಳೆದ 5 ವರ್ಷಗಳಿಂದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲೇ ತೇರ್ಗಡೆಯಾಗುತ್ತಿದ್ದಾರೆ. ಜಿಲ್ಲೆಯ 413 ಶಾಲೆಗಳಲ್ಲಿ 5ನೇ ಸ್ಥಾನವನ್ನು, ರಾಜ್ಯದ 10100ಶಾಲೆಗಳಲ್ಲಿ 129 ನೇಸ್ಥಾನವನ್ನು ಕಳೆದ ಬಾರಿ ಪಡೆದುಕೊಂಡಿತ್ತು. ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್ ಪಡೆದ ಚಿನ್ಮಯಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಚಾರ. 600 ಕ್ಕಿಂತ ಅಧಿಕ ಅಂಕವನ್ನು 18 ವಿದ್ಯಾರ್ಥಿಗಳು ಗಳಿಸಿದ್ದರೆ, ಕನ್ನಡ 9, ಇಂಗ್ಲಿಷ್ 10, ಹಿಂದಿ 4, ಗಣಿತ 4, ವಿಜ್ಞಾನ 1, ಸಮಾಜ ವಿಜ್ಞಾನ 4 ಮಂದಿ ಪೂರ್ಣ ಅಂಕ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜೊತೆಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ಆಡಳಿತಾಧಿಕಾರಿ ವಿ. ಮೋನಪ್ಪ ಶೆಟ್ಟಿ ದೇವಸ್ಯ, ನಿರ್ದೇಶಕ ಗೋಕುಲ್ ಶೇಟ್ ಹಾಗೂ ಉಪನ್ಯಾಸಕರು ಹಾಜರಿದ್ದರು.