ಎಸೆಸೆಲ್ಸಿ ಫಲಿತಾಂಶ : ವಾಕ್, ಶ್ರವಣ ಸಮಸ್ಯೆಯ ಯಶಸ್ವಿಗೆ ಶೇ. 92.16 ಅಂಕ
ಬಂಟ್ವಾಳ, ಎ. 30: ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಹೊಂದಿರುವ ಬಂಟ್ವಾಳ ತಾಲೂಕಿನ ಕೆದಿಲ ನಿವಾಸಿ ಯಶಸ್ವಿ ಕೆ. ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 92.16 ಅಂಕ ಗಳಿಸಿ ಸಾಧನೆ ಮೆರೆದಿದ್ದಾಳೆ.
ಬಂಟ್ವಾಳ ಎಸ್‍ವಿಎಸ್ ಕಾಲೇಜಿನ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ತಿಮ್ಮಪ್ಪ ಮೂಲ್ಯ ಕೆ. ಮತ್ತು ಪೆರ್ನೆ ಗ್ರಾಮ ಕಾರ್ಲ ಹಿ.ಪ್ರಾ. ಶಾಲಾ ಶಿಕ್ಷಕಿ ಯಶೋಧಾ ದಂಪತಿಯ ದ್ವಿತೀಯ ಪುತ್ರಿ ಯಶಸ್ವಿ, ಕಡೇಶ್ವಾಲ್ಯ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ 576 ಅಂಕ ಗಳಿಸಿದ್ದಾಳೆ.
ಶ್ರವಣ ಶಕ್ತಿ ಕೊರತೆ ಇರುವ, ಮಾತನಾಡಲು ಕಷ್ಟಪಡುವ ಈಕೆ ಅದ್ಭುತ ಏಕಾಗ್ರತೆ ಹೊಂದಿದ್ದಾಳೆ. ಹುಟ್ಟಾ ಶ್ರವಣದೋಷವಿದ್ದ ಈಕೆಯನ್ನು ಹೆತ್ತವರು ವಿಶೇಷ ಮುತುವರ್ಜಿ ವಹಿಸಿ ಓದು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿದ್ದಾರೆ. ಚೆಸ್‍ನಲ್ಲಿ ಈಕೆಗೆ ಇದ್ದ ವಿಶೇಷ ಆಸಕ್ತಿ ಗಮನಿಸಿದ ಹೆತ್ತವರು ಪುತ್ತೂರಿನಲ್ಲಿ ಚೆಸ್ ತರಬೇತಿ ನೀಡುತ್ತಿದ್ದು, 3 ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾಳೆ.