ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವ ಮಾಜಿ ಯೋಧ ತೇಜ್ ಬಹದ್ದೂರ್ ಗೆ ಚುನಾವಣಾ ಆಯೋಗದ ನೋಟಿಸ್

Update: 2019-05-01 06:24 GMT

ವಾರಣಾಸಿ: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿರುವ ಮಾಜಿ ಬಿಎಸ್‍ಎಫ್ ಜವಾನ ತೇಜ್ ಬಹದ್ದೂರ್ ಯಾದವ್ ಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.

ಯೋಧರಿಗೆ ನೀಡಲಾಗುತ್ತಿತ್ತೆನ್ನಲಾದ ಕಳಪೆ ಆಹಾರದ ಬಗ್ಗೆ ದೂರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಂತರ ತೇಜ್ ಬಹದ್ದೂರ್ ಸೇವೆಯಿಂದ ವಜಾಗೊಂಡಿದ್ದರು. ಭ್ರಷ್ಟಾಚಾರ ಅಥವಾ ಸರಕಾರಕ್ಕೆ ವಿಶ್ವಾಸದ್ರೋಹವೆಸಗಿ ವಜಾಗೊಳ್ಳುವ ರಾಜ್ಯ ಯಾ ಕೇಂದ್ರ ಸರಕಾರಿ ಉದ್ಯೋಗಿಗಳನ್ನು ಚುನಾವಣಾ ಪ್ರಚಾರದಿಂದ ಐದು ವರ್ಷಗಳ ಕಾಲ ಅನರ್ಹಗೊಳಿಸಲಾಗುತ್ತದೆ ಎಂದು ಆಯೋಗ ಮಂಗಳವಾರ ತಿಳಿಸಿದೆ.

ಇಂದಿನೊಳಗಾಗಿ ಸ್ಪಷ್ಟೀಕರಣ ನೀಡುವಂತೆ ತೇಜ್ ಬಹಾದುರ್ ಗೆ ನೀಡಿದ ನೋಟಿಸ್ ನಲ್ಲಿ ತಿಳಿಸಲಾಗಿದೆ. ಮೊದಲು ನಾಮಪತ್ರ ಸಲ್ಲಿಸಿದಾಗ ತಾನು ಸೇವೆಯಿಂದ ವಜಾಗೊಂಡಿದ್ದ ವಿಚಾರದ ಬಗ್ಗೆ ಮಾಹಿತಿ ನೀಡಿದ್ದ ಅವರು  ಎರಡನೇ ಬಾರಿ ನಾಮಪತ್ರ ಸಲ್ಲಿಸಿದಾಗ ಈ ವಿಚಾರ ಬಹಿರಂಗ ಪಡಿಸಿರಲಿಲ್ಲ.

ಇದೀಗ ನೋಟಿಸ್ ಗೆ ಅವರು ನೀಡುವ ಉತ್ತರದ ಆಧಾರದಲ್ಲಿ  ಅವರ ನಾಮಪತ್ರ ಸ್ವೀಕೃತ ಅಥವಾ ತಿರಸ್ಕೃತವಾಗಲಿದೆ.

ಆರಂಭದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ತೇಜ್ ಬಹದ್ದೂರ್ ಅವರು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆಂದು ಮಂಗಳವಾರ ಪಕ್ಷ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News