ದೋಷಪೂರಿತ ಹಿಪ್ ಇಂಪ್ಲಾಂಟ್: ರೂ. 1.90 ಕೋಟಿ ಪರಿಹಾರ ನೀಡುವಂತೆ ಜಾನ್ಸನ್ &ಜಾನ್ಸನ್ ಗೆ ಆದೇಶ
ಹೊಸದಿಲ್ಲಿ : ಜಾನ್ಸನ್&ಜಾನ್ಸನ್ ಕಂಪೆನಿಯ ದೋಷಪೂರಿತ ಹಿಪ್ ಇಂಪ್ಲಾಂಟ್ (ಪ್ರಸ್ಠದ ಕೀಲು ಬದಲಾವಣೆ) ಅಳವಡಿಸಲ್ಪಟ್ಟು ನಂತರ ಸಮಸ್ಯೆ ಎದುರಿಸಿದ ಇಬ್ಬರು ರೋಗಿಗಳಿಗೆ ಒಟ್ಟು ರೂ 1.90 ಕೋಟಿಗೂ ಅಧಿಕ ಪರಿಹಾರ ಪಾವತಿಸುವಂತೆ ಕಂಪೆನಿಗೆ ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಘಟನೆ (ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಝೇಶನ್- ಸಿಡಿಎಸ್‍ಸಿಒ ) ಆದೇಶಿಸಿದೆ. ಭಾರತದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣವೊಂದರಲ್ಲಿ ಗರಿಷ್ಠ ಪರಿಹಾರ ಘೋಷಿಸಿದ ಆದೇಶ ಇದಾಗಿದೆ. ಪರಿಹಾರ ಪಡೆಯಲಿರುವ ಇಬ್ಬರು ರೋಗಿಗಳೂ ಉತ್ತರ ಪ್ರದೇಶದವರಾಗಿದ್ದಾರೆ. ಈ ಇಬ್ಬರು ರೋಗಿಗಳು ರೂ. 90.27 ಲಕ್ಷ ಹಾಗೂ ರೂ. 1.01 ಕೋಟಿ ಪರಿಹಾರ ಪಡೆಯಲಿದ್ದಾರೆ.
ಈ ಎರಡೂ ಪ್ರಕರಣಗಳು ಸೇರಿದಂತೆ ಇಲ್ಲಿಯ ತನಕ ಸಿಡಿಎಸ್‍ಸಿಒ ಒಟ್ಟು ನಾಲ್ಕು ರೋಗಿಗಳಿಗೆ ಇಂತಹ ಪ್ರಕರಣಗಳಲ್ಲಿ ಪರಿಹಾರ ಘೋಷಿಸಿದೆ. ಮೇಲಿನ ಪ್ರಕರಣದಲ್ಲಿ 30 ದಿನಗಳೊಳಗೆ ಪರಿಹಾರ ಮೊತ್ತ ಪಾವತಿಸುವಂತೆ ಆದೇಶಿಸಲಾಗಿದೆ.
ಜಾನ್ಸನ್ & ಜಾನ್ಸನ್ ಕಂಪೆನಿಯ ಅಂಗ ಸಂಸ್ಥೆಯಾದ ಡಿಪುಯ್ ಇಂಟರನ್ಯಾಷನಲ್ ಲಿಮಿಟೆಡ್ ತಯಾರಿಸಿದ ಎಎಸ್‍ಆರ್ ಹಿಪ್ ಇಂಪ್ಲಾಂಟ್ ಅನ್ನು ಆಗಸ್ಟ್ 2010ಕ್ಕಿಂತ ಮೊದಲು ಅಳವಡಿಸಲ್ಪಟ್ಟು ಸಮಸ್ಯೆಗೊಳಗಾದ ರೋಗಿಗಳಿಗೆ ಪರಿಹಾರ ಮೊತ್ತ ನಿಗದಿ ಪಡಿಸಲು ಒಂದು ಸೂತ್ರವನ್ನು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದಿಸಿತ್ತು. ಇದರಂತೆ ಸಮಸ್ಯೆಗೀಡಾದ ರೋಗಿಗಳಿಗೆ ರೂ. 30 ಲಕ್ಷದಿಂದ ರೂ .1.23 ಕೋಟಿ ತನಕ ಪರಿಹಾರ ಒದಗಿಸಬೇಕೆಂದು ನಿರ್ಧರಿಸಲಾಗಿತ್ತು.
ದೇಶದಲ್ಲಿ 2004 ಹಾಗೂ 2010ರ ನಡುವಿನ ಅವಧಿಯಲ್ಲಿ 4,700 ಹಿಪ್ ಇಂಪ್ಲಾಂಟ್ ಶಸ್ತ್ರಕ್ರಿಯೆಗಳ ನಡೆದಿದ್ದರೂ ಸಹಾಯವಾಣಿಯ ಮುಖಾಂತರ ಅವರಲ್ಲಿ ಕೇವಲ 1,080 ಮಂದಿಯನ್ನು ಮಾತ್ರ ಪತ್ತೆ ಹಚ್ಚುವುದು ಸಾಧ್ಯವಾಗಿತ್ತು.
2017ರಲ್ಲಿ ಸರಕಾರ ಮೌಲಾನ ಆಝಾದ್ ಮೆಡಿಕಲ್ ಕಾಲೇಜಿನ ಮಾಜಿ ಡೀನ್ ಡಾ ಅರುಣ್ ಅಗರ್ವಾಲ್ ಅವರ ನೇತೃತ್ವದ ಸಮಿತಿಯನ್ನು ರಚಿಸಿ ಪ್ರತಿಯೊಬ್ಬ ಸಮಸ್ಯೆಗೀಡಾದ ರೋಗಿಗೆ ಎಷ್ಟು ಪರಿಹಾರ ನೀಡಬೇಕೆಂದು ಶಿಫಾರಸು ಮಾಡುವ ಕೆಲಸವನ್ನು ಅದಕ್ಕೆ ವಹಿಸಿತ್ತು.