×
Ad

'ಕುಡ್ಸೆಂಪ್ ಕಾಮಗಾರಿ ಕಳಪೆ ಸಾಬೀತಾದರೆ ರಾಜಕೀಯ ನಿವೃತ್ತಿ, ಇಲ್ಲವಾದಲ್ಲಿ ಶಾಸಕ ವೇದವ್ಯಾಸ ಕಾಮತ್ ನಿವೃತ್ತಿಯಾಗಲಿ'

Update: 2019-05-01 13:08 IST

ಮಂಗಳೂರು, ಮೇ 1: ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಲು ಕುಡ್ಸೆಂಪ್ ಯೋಜನೆಯ ನಿರ್ದೇಶಕರಾಗಿದ್ದ ನಾನು ಕಾರಣ ಎಂಬುದಾಗಿ ಹಾಲಿ ಶಾಸಕ ವೇದವ್ಯಾಸ ಕಾಮತ್‌ ಮಾಡಿರುವ ಆರೋಪವನ್ನು ಸರಕಾರ ಪರಿಶೀಲನೆ ನಡೆಸಿ ಕಳಪೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯದಿಂದ ಸಂಪೂರ್ಣಾಗಿ ನಿವೃತ್ತಿಯಾಗುತ್ತೇನೆ. ಇಲ್ಲವಾದಲ್ಲಿ ಹಾಲಿ ಶಾಸಕರು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಸವಾಲೆಸೆದಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈ ಸವಾಲು ಹಾಕಿರುವ ಅವರು, ಎಡಿಬಿ ನೆರವಿನ ಮೊದಲ ಹಂತದ 160 ಕೋಟಿ ರೂ.ಗಳ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿರುವುದು ಬೇಜವಾಬ್ದಾರಿಯಿಂದ ಕೂಡಿದೆ ಎಂದು ಟೀಕಿಸಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತಿನಲ್ಲಿ ಮಾತ್ರವೇ ಭಂಡತನ ಪ್ರದರ್ಶಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಶಾಸಕನಾಗಿ ಕುಡಿಯುವ ನೀರು ಸಮಸ್ಯೆ ನೀಗಿಸಲು ಅವರೇನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಲಿ ಎಂದರು.

ಕೇವಲ ಮನವಿ, ಪತ್ರಿಕಾ ಹೇಳಿಕೆ ನೀಡಿ, ಸಮಸ್ಯೆ ಇರುವಲ್ಲಿಗೆ ಹೋಗಿ ಫೋಟೋ ತೆಗೆಸುವ ಕಾರ್ಯ ಮಾತ್ರ ಅವರು ಮಾಡಿದ್ದು ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಪ್ರತ್ಯಾರೋಪ ಮಾಡಿದರು.

2002ರಲ್ಲಿ ಮಹಾನಗರ ಪಾಲಿಕೆ ಆಯುಕ್ತನಾಗಿದ್ದ ಸಂದರ್ಭ ಕುಡ್ಸೆಂಪ್ 1ನೆ ಯೋಜನೆಯ ವಿವಿಧ ವಿಚಾರಗಳನ್ನು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗಿತ್ತು. ಮೂಲ ಯೋಜನೆಯಂತೆ ಕುಡಿಯುವ ನೀರು ಯೋಜನೆಗೆ 170 ಕೋಟಿ ರೂ. ಹಾಗೂ ಒಳಚರಂಡಿ (ಹಳೆ ಮಂಗಳೂರಿನ ಒಳಚರಂಡಿಯನ್ನು ದುರಸ್ತಿಗೊಳಿಸಲು) ಗೆ 41 ಕೋಟಿ ರೂ. ಇಡಲಾಗಿತ್ತು. ಆದರೆ ಶಾಸಕರು, ಸಂಸತ್ ಸದಸ್ಯರು ಹಾಗೂ ಮನಪಾ ಸದಸ್ಯರು ಅಂದು ಒಳಚರಂಡಿಯನ್ನು ನಗರದ ವಿಸ್ತೃತಾ ಭಾಗಕ್ಕೆ ಮಾಡಬೇಕು ಎಂದು ನಿರ್ಣಯಿಸಿ ಕುಡಿಯುವ ನೀರಿಗೆ 110 ಕೋಟಿ ರೂ. ಬೆರೆ ಕೆಲವು ಯೋಜನೆ ರದ್ದು ಪಡಿಸಿ ಒಳಚರಂಡಿಗೆ 145 ಕೋಟಿ ರೂ.ಗಳನ್ನು ಮೀಸಲಿಡಲಾಯಿತು. ಇದರಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಮನೆ ಮನೆ ಸಂಪರ್ಕ ಹಾಗೂ ವಿತರಣಾ ಜಾಲವನ್ನು ಕಡಿತಗೊಳಿಸಲಾಯಿತು. ಈ ಕಾರಣದಿಂದ ಪಾಲಿಕೆಯ ವಿತರಣೆಯ ಪಿವಿಸಿ ಪೈಪು ಲೈನ್ ಸುಮಾರು 4000 ಕಿ.ಮೀ. ಹಾಕಿರುವುದು ಬದಲಾಯಿಸಲು ಸಾಧ್ಯವಾಗಲಿಲ್ಲ. ಕುಡ್ಸೆಂಪ್‌ನಲ್ಲಿ ಕೇವಲ 750 ಕಿ.ಮೀ. ವಿತರಣೆ ಪೈಪ್ ಹಾಕಲಾಯಿತು. ನಗರದಲ್ಲಿ 1961ರಲ್ಲಿ 2.5 ಎಂಜಿಡಿ ಹಳೆ ಪೈಪ್ ಇತ್ತು. ಇದರಿಂದ ಸದ್ಯ ಹೊರವಲಯದ ಗ್ರಾಮಗಳು ನೀರನ್ನು ಪಡೆಯುತ್ತಿವೆ. 1972ರಲ್ಲಿ ಎಂಸಿಎಫ್ ಕಾರ್ಖಾನೆಯ ಸಂದರ್ಭ ರಾಜ್ಯ ಸರಕಾರ 18 ಎಂಜಿಡಿ ಯೋಜನೆ ನಗರಕ್ಕೆ ನೀಡಿತು. ಇಂದು ಮಂಗಳೂರಿಗೆ ಸಾಕಷ್ಟು ನೀರು ಬರಲು ಈ ಕುಡ್ಸೆಂಪ್ ಯೋಜನೆ ಕಾರಣ. ಇದರಲ್ಲಿ ಯಾವುದೇ ರೀತಿಯ ಕಳಪೆ ಕಾಮಗಾರಿ ಆಗಿದೆ ಎಂಬುದನ್ನು ಶಾಸಕರು ಸಾಬೀತು ಪಡಿಸಲಿ ಎಂದು ಲೋಬೋ ಸವಾಲು ಹಾಕಿದರು.

ನಗರಕ್ಕೆ ನೀರಿನ ಸಮಸ್ಯೆಗೆ ಮುಖ್ಯ ಕಾರಣ ತುಂಬೆಯಿಂದ ನಗರಕ್ಕೆ ಬರುವ ಮುಖ್ಯ ಕೊಳವೆಯಿಂದ ನೇರವಾಗಿ ದಾರಿಯಲ್ಲಿ ಸಿಗುವ ಗ್ರಾಮಗಳಲ್ಲಿ ನೀರು ತೆಗೆಯಾಗುತ್ತಿದೆ. ಈ ಮೂಲಕ ಶೇ. 20ರಷ್ಟು ಸೋರಿಕೆಯಾಗುತ್ತಿದೆ. ನಗರದ ಒಳಗಡೆ ಸಮರ್ಪಕ ವಿತರಣಾ ಜಾಲ ಇಲ್ಲದೆ ಪಾಲಿಕೆಯ ಹಳೆ ಪಿವಿಸಿ ಪೈಪಿನ ವಿತರಣೆಯಲ್ಲಿ ಶೇ. 30ರಷ್ಟು ಸೋರಿಕೆಯಾಗುತ್ತಿದೆ. ಕುಡ್ಸೆಂಪ್‌ನ ಮೂಲ ಯೋಜನೆಯಂತೆ ನೀರು ಸರಬರಾಜು ವ್ಯವಸ್ಥೆ ಅನುಷ್ಠಾನ ಆಗಿದ್ದಲ್ಲಿ ವಿತರಣಾ ಜಾಲದ ಸೋರುವಿಕೆಯನ್ನು ಶೇ. 10ಕ್ಕೆ ಇಳಿಸಬಹುದಿತ್ತು. ಪ್ರಸ್ತುತ ತುಂಬೆಯಿಂದ ನಗರಕ್ಕೆ ಸರಬರಾಜಾಗುವ ನೀರಿನಲ್ಲಿ ನಾಗರಿಕರ ಮನೆಗಳಿಗೆ ತಲುಪುವುದು ಶೇ. 50ರಷ್ಟು ಮಾತ್ರ ಎಂದವರು ವಿವರ ನೀಡಿದರು.

ತುಂಬೆಯಲ್ಲಿ 7 ಮೀಟರ್ ಎತ್ತರದ ಡ್ಯಾಂ ನಿರ್ಮಿಸಲು ಕುಡ್ಸೆಂಪ್ ನಿರ್ದೇಶಕನಾಗಿದ್ದಾಗ ಸರಕಾರಕ್ಕೆ ಕಳುಹಿಸಿದ್ದೆ. ಇದನ್ನು 2007ರ ಫೆಬ್ರವರಿ 3ರಂದು ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಜೂರು ಮಾಡಿಸಿದ್ದು. ಆದರೆ ವೇದವ್ಯಾಸ ಕಾಮತ್‌ರವರು ಇದನ್ನು ಯಡಿಯೂರಪ್ಪನವರು ಮಂಜೂರು ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ. ಯೋಜನೆ 40 ಕೋಟಿ ರೂ.ಗೆ ಮಂಜೂರಾಗಿ 13.33 ಕೋಟಿ ರೂ. ಕೆಯುಐಡಿಎಫ್‌ಸಿ ಹಾಗೂ 13.33 ಕೋಟಿ ರೂ. ಮಹಾನಗರ ಪಾಲಿಕೆ ಹಾಕುವಂತೆ ಸರಕಾರ ಆದೇಶ ಮಾಡಿತ್ತು. ಬಳಿಕ ತಜ್ಞ ಸಂಸ್ಥೆಗಳು ವಿನ್ಯಾಸ ಅಧ್ಯಯನ ಮಾಡಿ ಹೊಸ ವಿನ್ಯಾಸ ತಯಾರಿಸಿದಾಗ ಇದು ಅಂದಾಜು ವೆಚ್ಚ 75.50 ಕೋಟಿ ರೂ.ಗೆ ಏರಿಕೆಯಾಯಿತು. ನಾನು ಶಾಸಕನಾದ ಬಳಿಕ ವಿನಯ ಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ಮುಖ್ಯಮಂತ್ರಿ ಜತೆ ಮಾತನಾಡಿ ಅಂದಾಜು ಪಟ್ಟಿಗೆ 2014ರ ಎಪ್ರಿಲ್ 28ರಂದು ಮಂಜೂರಾತಿ ಪಡೆಯಲಾಯಿತು. ಇದು ನಾನು ಮಾಡಿರುವುದು ಎಂದು ಧೈರ್ಯದಿಂದ ಹೇಳುತ್ತೇನೆ. ಇದರಲ್ಲಿ ಬಿಜೆಪಿ ಕೊಡುಗೆ ಏನೂ ಇಲ್ಲ ಎಂದು ಅವರು ಹೇಳಿದರು.

ತುಂಬೆಯಲ್ಲಿ 6 ಮೀಟರ್ ನೀರು ನಿಲ್ಲಿಸುವುದಾದರೆ ಕೆಲವು ಪ್ರದೇಶ ಹಾಗೂ 7 ಮೀಟರ್ ನಿಲ್ಲಿಸುವುದಾದರೆ ಇನ್ನೂ ಹೆಚು ಪ್ರದೇಶ ಮುಳುಗಡೆ ಆಗುತ್ತದೆ. ಇದಕ್ಕಾಗಿ ಭೂ ಸ್ವಾಧೀನಕ್ಕೆ 120 ಕೋಟಿ ರೂ. ಬೇಕೆಂದು ಹೇಳಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ, ಮಾಜಿ ಶಾಸಕರ ಜತೆ ಮುಖ್ಯಮಂತ್ರಿ ಬಳಿ ತೆರಳಿ ತಾತ್ಕಾಲಿಕ ಪರಿಹಾರ 30 ಕೋಟಿ ರೂ. ಮಂಜೂರು ಮಾಡಿಸಿ ಸದ್ಯ 6 ಮೀಟರ್ ನೀರು ನಿಲ್ಲಿಸಲು ಸಾಧ್ಯವಾಗಿದೆ. ಇಷ್ಟೆಲ್ಲಾ ಮಾಡಿದರೂ ಈಗಿನ ಶಾಸಕರು ಕಾಂಗ್ರೆಸ್‌ನವರು ಏನು ಮಾಡಿದ್ದಾರೆ. ಮಾಜಿ ಶಾಸಕರು ಏನು ಮಾಡಿದ್ದಾರೆ ಎಂದು ಕೇಳುವುದಾದರೆ ಅವರಿಗೆ ಮಾಹಿತಿ ಕೊರತೆ ಇದೆ ಎಂದು ನಾನು ಹೇಳುತ್ತೇನೆ ಎಂದು ಮಾಜಿ ಶಾಕ ಜೆ.ಆರ್. ಲೋಬೋ ಹೇಳಿದರು.

ಗೋಷ್ಠಿಯಲ್ಲಿ ಭಾಸ್ಕರ ಮೊಯ್ಲಿ, ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕೆ., ನವೀನ್ ಡಿಸೋಜಾ, ಹರಿನಾಥ್, ವಿನಯ ರಾಜ್, ಕೇಶವ ಮರೋಳಿ, ಟಿ.ಕೆ. ಸುಧೀರ್, ಪ್ರೇಮ್ ಲಾಲ್‌ಬಾಗ್, ನೀರಜ್ ಪಾಲ್, ರಮಾನಂದ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News