ಅಂಗವಿಕಲ ವಧು-ವರರಿಗೆ 50 ಸಾವಿರ ರೂ. ಸಹಾಯ ಧನ: ಜಿ.ಶಂಕರ್

Update: 2019-05-01 10:46 GMT

ಉಡುಪಿ, ಮೇ 1: ಕಳೆದ 10 ವರ್ಷದಲ್ಲಿ 312 ಜೋಡಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದು, ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಬಾರಿಯ ವಿವಾಹದಲ್ಲಿ ಭಾಗವಹಿಸಿದ 3 ಮಂದಿ ಅಂಗವಿಕಲ ವಧು ವರರಿಗೆ  ಜಿ.ಶಂಕರ್ -ಫ್ಯಾಮಿಲಿ ಟ್ರಸ್ಟ್‌ನಿಂದ 50 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ನಾಡೋಜ ಡಾ. ಜಿ. ಶಂಕರ್ ಹೇಳಿದ್ದಾರೆ.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಬುಧವಾರ ನಡೆದ ಮೊಗವೀರ ಉಚಿತ ಸಾಮೂಹಿಕ ವಿವಾಹದಲ್ಲಿ ಅವರು ಮಾತನಾಡುತ್ತಿದ್ದರು.

ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೆರಾ ಮಾತನಾಡಿ, ಮದುವೆ  ವರದಕ್ಷಿಣೆ ಮತ್ತು  ಉಡುಗೊರೆ ರಹಿತವಾಗಿದ್ದು, ಆಡಂಬರದ ಮದುವೆಗೆ ಕಡಿವಾಣ ಹಾಕಿ ಸರಳ ವಿವಾಹ ನಡೆಸಲಾಗಿದೆ ಎಂದು ಹೇಳಿದರು.

ವಧುವಿಗೆ ತಾಳಿಸರ, ಕಾಲುಂಗುರ, ಸೀರೆ, ರವಿಕೆ ಕಣ , ವರನಿಗೆ  ಕುರ್ತಾ ಪೈಜಮ ಸೇರಿದಂತೆ ಉಡುಗೊರೆಯನ್ನು 14 ಜೋಡಿಗಳಿಗೆ ಸಂಘಟನೆಯ ವತಿಯಿಂದ ನೀಡಲಾಯಿತು.

ಸಂಘಟನೆಯ ವತಿಯಿಂದ ಸ್ಥಳದಲ್ಲೇ ವಿವಾಹ ನೋಂದಣಿ ನಡೆಸಲಾಯಿತು. ವಿದ್ವಾನ್ ವೇದವ್ಯಾಸ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ಶಾಲಿನಿ ಶಂಕರ್, ಶ್ಯಾಮಿಲಿ ಶಂಕರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News