ನ್ಯೂಝಿಲ್ಯಾಂಡ್ ಪ್ರಧಾನಿಗೆ ವಿವಾಹ ನಿಶ್ಚಿತಾರ್ಥ

Update: 2019-05-03 14:29 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಮೇ 3: ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂದ ಆರ್ಡರ್ನ್ ಮತ್ತು ಅವರ ದೀರ್ಘ ಕಾಲದ ಸಂಗಾತಿ ಕ್ಲಾರ್ಕ್ ಗೇಫೋರ್ಡ್ ಮದುವೆಯಾಗಲು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಪ್ರಧಾನಿ ಕಚೇರಿ ಶುಕ್ರವಾರ ತಿಳಿಸಿದೆ.

ಈಸ್ಟರ್ ರಜೆಯಲ್ಲಿ ಜೋಡಿಯು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂದು ಆರ್ಡರ್ನ್ ಮತ್ತು ಗೇಫೋರ್ಡ್ ಅವರ ವಕ್ತಾರರೊಬ್ಬರು ಹೇಳಿದರು.

ಆದರೆ, ಮದುವೆ ಯಾವಾಗ ನಡೆಯುತ್ತದೆ ಎನ್ನುವುದನ್ನು ಅವರು ತಿಳಿಸಲಿಲ್ಲ.

38 ವರ್ಷದ ಜಸಿಂದ ಮತ್ತು ಅವರ ಸಂಗಾತಿ ಈಗಾಗಲೇ ಹೆಣ್ಣು ಮಗುವೊಂದನ್ನು ಹೊಂದಿದ್ದಾರೆ. ಕಳೆದ ವರ್ಷದ ಜೂನ್‌ನಲ್ಲಿ ಜಸಿಂದ ಮಗುವಿಗೆ ಜನ್ಮ ನೀಡಿದ್ದಾರೆ. ಆ ಮೂಲಕ ಅಧಿಕಾರದಲ್ಲಿರುವಾಗಲೇ ಮಗುವೊಂದಕ್ಕೆ ಜನ್ಮ ನೀಡಿದ ಜಗತ್ತಿನ ಎರಡನೇ ಪ್ರಧಾನಿ ಅವರಾಗಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನಕ್ಕೂ ಅವರು ಬಳಿಕ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.

ಟೆಲಿವಿಶನ್‌ನಲ್ಲಿ ಮೀನಿಗೆ ಗಾಳ ಹಾಕುವ ಕಾರ್ಯಕ್ರಮವೊಂದನ್ನು ನಡೆಸಿಕೊಡುವ ಗೇಫೋರ್ಡ್, ಈಗ ಮನೆಯಲ್ಲೇ ಇದ್ದು ಮಗುವನ್ನು ನೋಡಿಕೊಳ್ಳುತ್ತಿದ್ದಾರೆ.

ಶುಕ್ರವಾರ ವಜ್ರದ ಉಂಗುರ ಧರಿಸಿಕೊಂಡು ಕೆಲಸ ಮಾಡುತ್ತಿದ್ದ ಪ್ರಧಾನಿಯನ್ನು ಪತ್ರಕರ್ತರು ಗಮನಿಸಿದ ಬಳಿಕ, ಅವರ ನಿಶ್ಚಿತಾರ್ಥದ ಸುದ್ದಿ ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News