×
Ad

ಮಹಾರಾಷ್ಟ್ರದ ನಾಲಾಸೋಪರ್‌ನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಮೂವರು ಕಾರ್ಮಿಕರು ಮೃತ್ಯು

Update: 2019-05-03 20:36 IST

ಮುಂಬೈ,ಮೇ 3: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಾಲಾಸೋಪರ್‌ನಲ್ಲಿ ಶುಕ್ರವಾರ ಸೆಪ್ಟಿಕ್ ಟ್ಯಾಂಕ್‌ನ್ನು ಸ್ವಚ್ಛಗೊಳಿಸುತ್ತಿದ್ದ ಮೂವರು ಕಾರ್ಮಿಕರು ದಾರುಣ ಸಾವನ್ನಪ್ಪಿದ್ದಾರೆ.

ನೈಲ್‌ಮೋರ್ ಬಡಾವಣೆಯ ಆನಂದ ವ್ಯೆ ಅಪಾರ್ಟ್‌ಮೆಂಟ್ಸ್‌ನಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

25ರಿಂದ 35 ವರ್ಷ ವಯೋಮಾನದ ಮೂವರು ಕಾರ್ಮಿಕರು ಸ್ವಚ್ಛಗೊಳಿಸಲೆಂದು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಇಳಿದಿದ್ದರು. ಬಹುಶಃ ವಿಷಾನಿಲ ಸೇವನೆಯಿಂದ ಅವರು ಮೃತಪಟ್ಟಿದ್ದಾರೆ ಎಂದು ಪಾಲ್ಘರ್ ಪೊಲೀಸ್ ವಕ್ತಾರ ಹೇಮಂತ ಕಾಟ್ಕರ್ ತಿಳಿಸಿದರು.

ಕಟ್ಟಡದ ಸೂಪರ್‌ವೈಸರ್ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಗಾಗಿ ಆರು ಕಾರ್ಮಿಕರನ್ನು ಕರೆ ತಂದಿದ್ದು,ಅವರ ಪೈಕಿ ಓರ್ವ ಒಳಗಿಳಿದಾಗ ವಿಷಾನಿಲ ಸೇವಿಸಿ ಒದ್ದಾಡುತ್ತಿದ್ದ. ಆತನ ರಕ್ಷಣೆಗಾಗಿ ಇತರ ಇಬ್ಬರು ಕೆಳಕ್ಕಿಳಿದಿದ್ದರು. ಆದರೆ ಎಲ್ಲ ಮೂವರೂ ಸಾವನ್ನಪ್ಪಿದ್ದಾರೆ. ಮೃತರನ್ನು ಸುನಿಲ್ ಚಾವ್ರಿಯಾ(30), ಪ್ರದೀಪ್ ಸರ್ವಾಯ್(25) ಮತ್ತು ಬಿಕಾ ಬುಂಬಕ್ (25) ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣೆ ತಂಡ ಶವಗಳನ್ನು ಸೆಪ್ಟಿಕ್ ಟ್ಯಾಂಕ್‌ನಿಂದ ಹೊರಕ್ಕೆ ತೆಗೆದಿದ್ದು,ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ನಿರ್ಲಕ್ಷದ ಆರೋಪದಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು,ಸೂಪರ್‌ವೈಸರ್‌ನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕಾಟ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News