×
Ad

ಲೋಕಸಭಾ ಚುನಾವಣೆ: ಆರನೇ ಹಂತದಲ್ಲಿ ಸಿಂದಿಯಾ ಅತ್ಯಂತ ಶ್ರೀಮಂತ ಅಭ್ಯರ್ಥಿ

Update: 2019-05-03 21:14 IST

ಹೊಸದಿಲ್ಲಿ,ಮೇ 3: ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದ ಜ್ಯೋತಿರಾದಿತ್ಯ ಸಿಂದಿಯಾ ಅವರು ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿದ್ದಾರೆ. ಅವರು 374 ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

147 ಕೋ.ರೂ.ಗಳ ಆಸ್ತಿ ಹೊಂದಿರುವ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಅಭ್ಯರ್ಥಿ 967 ಅಭ್ಯರ್ಥಿಗಳ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಎಂದು ನ್ಯಾಷನಲ್ ಎಲೆಕ್ಷನ್ ವಾಚ್ ಆ್ಯಂಡ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಶುಕ್ರವಾರ ತಿಳಿಸಿದೆ.

ಮೇ 12ರಂದು ಮತದಾನ ನಡೆಯಲಿರುವ ಆರನೇ ಹಂತದ ಚುನಾವಣಾ ಕಣದಲ್ಲಿರುವ 979 ಅಭ್ಯರ್ಥಿಗಳು ತಮ್ಮ ನಾಮಪತ್ರಗಳೊಂದಿಗೆ ಸಲ್ಲಿಸಿರುವ ಅಫಿಡವಿಟ್‌ಗಳನ್ನು ವಿಶ್ಲೇಷಿಸಿರುವ ಎಡಿಆರ್,ಇತರ 12 ಅಭ್ಯರ್ಥಿಗಳ ಅಫಿಡವಿಟ್‌ಗಳು ಸಕಾಲದಲ್ಲಿ ಕೈಸೇರದ್ದರಿಂದ ಅವುಗಳನ್ನು ವಿಶ್ಲೇಷಿಸಿಲ್ಲ.

ಪ್ರಮುಖ ಪಕ್ಷಗಳ ಪೈಕಿ ಬಿಜೆಪಿಯ 46,ಕಾಂಗ್ರೆಸ್‌ನ 37,ಬಿಎಸ್‌ಪಿಯ 31,ಆಪ್‌ನ 6 ಮತ್ತು 71 ಪಕ್ಷೇತರ ಅಭ್ಯರ್ಥಿಗಳು ಒಂದು ಕೋ.ರೂ.ಗೂ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ, ಆರನೇ ಹಂತದಲ್ಲಿ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ ಮೌಲ್ಯ 3.41 ಕೋ.ರೂ.ಆಗಿದೆ ಎಂದು ಎಡಿಆರ್ ವರದಿಯು ತಿಳಿಸಿದೆ. ಪ.ಬಂಗಾಳದ ಪುರುಲಿಯಾ ಕ್ಷೇತ್ರದಲ್ಲಿ ಶಿವಸೇನೆಯ ಅಭ್ಯರ್ಥಿಯಾಗಿರುವ ರಾಜೀವ ಮಹತೋ ಶೂನ್ಯ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ಅದು ಹೇಳಿದೆ.

395 ಅಭ್ಯರ್ಥಿಗಳು 5ರಿಂದ 12ನೇ ತರಗತಿವರಗಿನ ವಿದ್ಯಾರ್ಹತೆಗಳನ್ನು ಮತ್ತು 509 ಅಭ್ಯರ್ಥಿಗಳು ಪದವಿ ಮತ್ತು ಅದಕ್ಕೂ ಹೆಚ್ಚಿನ ವಿದ್ಯಾರ್ಹತೆಯನ್ನು ಘೋಷಿಸಿದ್ದಾರೆ.

35 ಅಭ್ಯರ್ಥಿಗಳು ಕೇವಲ ಸಾಕ್ಷರರಾಗಿದ್ದರೆ 10 ಅಭ್ಯರ್ಥಿಗಳು ನಿರಕ್ಷರಿಗಳಾಗಿದ್ದಾರೆ. ಏಳು ರಾಜ್ಯಗಳ 59 ಕ್ಷೇತ್ರಗಳಲ್ಲಿ ಒಟ್ಟು 83 ಮಹಿಳಾ ಅಭ್ಯರ್ಥಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News