ಮೋದಿ ಜಿ ಆಪ್ ಶಾಸಕರನ್ನು ಖರೀದಿಸುವುದು ಅಷ್ಟು ಸುಲಭವಲ್ಲ: ಅರವಿಂದ್ ಕೇಜ್ರಿವಾಲ್

Update: 2019-05-03 16:11 GMT

ಹೊಸದಿಲ್ಲಿ, ಮೇ 3: ಆಪ್‌ನ 14 ಮಂದಿ ಶಾಸಕರು ಬಿಜೆಪಿಯ ಸಂಪರ್ಕದಲ್ಲಿ ಇದ್ದಾರೆ ಎಂದು ಕೇಂದ್ರ ಸಚಿವ ವಿಜಯ್ ಗೋಯಲ್ ಪ್ರತಿಪಾದಿಸಿದ ಬಳಿಕ ಪ್ರತೀಕಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿಳಾಸಕ್ಕೆ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಆಪ್ ನಾಯಕರನ್ನು ಖರೀದಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ. ‘‘ಮೋದಿ ಜಿ ಅವರೇ, ಶಾಸಕರನ್ನು ಖರೀದಿಸುವ ಮೂಲಕ ಪ್ರತಿಪಕ್ಷ ನಡೆಸುತ್ತಿರುವ ಸರಕಾರವನ್ನು ನೀವು ಉರುಳಿಸುವಿರಾ ? ಇದು ಪ್ರಜಾಪ್ರಭುತ್ವದ ನಿಮ್ಮ ವ್ಯಾಖ್ಯಾನವೇ ? ಶಾಸಕರನ್ನು ಖರೀದಿಸಲು ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ನೀವು ಎಲ್ಲಿಂದ ತರುತ್ತೀರಿ? ನೀವು ನಮ್ಮ ಶಾಸಕರನ್ನು ಹಲವು ಬಾರಿ ಖರೀದಿಸಲು ಪ್ರಯತ್ನಿಸಿದ್ದೀರಿ. ಆದರೆ, ಆಪ್ ನಾಯಕರನ್ನು ಖರೀದಿಸುವುದು ಅಷ್ಟು ಸುಲಭವಲ್ಲ’’ ಎಂದು ಕೇಜ್ರಿವಾಲ್ ಟ್ವೀಟ್‌ನಲ್ಲಿ ಹೇಳಿದ್ದಾರೆ. ‘ಹತಾಶೆ ಹಾಗೂ ಅವಮಾನ’ದಿಂದ ಆಪ್‌ನ 14 ಶಾಸಕರು ಪಕ್ಷ ತ್ಯಜಿಸಲು ಬಯಸಿದ್ದಾರೆ ಎಂದು ವಿಜಯ್ ಗೋಯಲ್ ಗುರುವಾರ ಹೇಳಿದ್ದರು. ಈ ಶಾಸಕರನ್ನು ಖರೀದಿಸುವ ಅಗತ್ಯ ಬಿಜೆಪಿಗೆ ಇಲ್ಲ ಎಂದು ಕೂಡ ಅವರು ತಿಳಿಸಿದ್ದರು. 

ಪಕ್ಷ ತ್ಯಜಿಸಿ ಬಿಜೆಪಿಗೆ ಸೇರಲು ಆಪ್‌ನ 7 ಶಾಸಕರಿಗೆ 10 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂಬ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರ ಆರೋಪವನ್ನು ವಿಜಯ್ ಗೋಯಲ್ ನಿರಾಕರಿಸಿದ್ದಾರೆ. ‘‘ಪಕ್ಷ ತನ್ನ ಗುರಿಯಿಂದ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಆಪ್ ತ್ಯಜಿಸಲು ಬಯಸುತ್ತಿದ್ದಾರೆ.’’ ಎಂದು ಗೋಯಲ್ ಪ್ರತಿಪಾದಿಸಿದ್ದಾರೆ. ನಿಮ್ಮ ಮಾತುಗಳು ಎಲ್ಲಿ ಸಿಲುಕಿವೆ ? ನೀವು ಎಷ್ಟು ಹಣ ನೀಡುತ್ತೀರಿ ? ಅವರು ಎಷ್ಟು ಬೇಡಿಕೆ ಇಟ್ಟಿದ್ದಾರೆ ? ಎಂದು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ದಿಲ್ಲಿಯ ಎಲ್ಲ 7 ಲೋಕಸಭಾ ಸ್ಥಾನಗಳಿಗೆ ಎರಡನೇ ಹಂತವಾದ ಮೇ 12ರಂದು ಮತದಾನ ನಡೆಯಲಿದೆ. 7 ಹಂತದ ಚುನಾವಣೆಯಲ್ಲಿ ಆರನೇ ಸುತ್ತಿನ ಮತದಾನ ಮೇ 19ರಂದು ಅಂತ್ಯಗೊಳ್ಳಲಿದೆ. ಮೇ 23ರಂದು ಫಲಿತಾಂಶ ಘೋಷಣೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News