ಫನಿ ಚಂಡಮಾರುತ ಒಡಿಶಾ: 800 ಗರ್ಭಿಣಿಯರ ಸ್ಥಳಾಂತರ
ಭುವನೇಶ್ವರ, ಮೇ 3: ಫನಿ ಚಂಡಮಾರುತ ಪೀಡಿತ ಒಡಿಶಾದಲ್ಲಿ 800ಕ್ಕೂ ಅಧಿಕ ಗರ್ಭಿಣಿಯರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಫನಿ ಚಂಡಮಾರುತ ಪೂರ್ವ ಭಾರತಕ್ಕೆ ಗುರುವಾರ ಅಪ್ಪಳಿಸಿದ್ದು, ಪುರಿಯಲ್ಲಿ ಹಲವು ಮರಗಳು ಬುಡಮೇಲಾಗಿವೆ. ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಭೂಕುಸಿತದ ಹಿನ್ನೆಲೆಯಲ್ಲಿ ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಗಂಟೆಗೆ 200 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ ಚಂಡ ಮಾರುತದಿಂದ ಭುವನೇಶ್ವರ ಹಾಗೂ ಪುರಿಯಲ್ಲಿ ಮರಗಳು ಧರೆಗುರುಳಿದವು. ಪುರಿಯಲ್ಲಿ ವಿದ್ಯುತ್ ಪೂರೈಕೆ ಹಾಗೂ ದೂರವಾಣಿ ಸಂಪರ್ಕ ಕಡಿತಗೊಂಡಿತು ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಬಿಷ್ಣುಪ್ರಸಾದ್ ಸೇಥಿ ಹೇಳಿದ್ದಾರೆ.
ಭುವನೇಶ್ವರದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದವು. ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲು ಅಧಿಕಾರಿಗಳು ಆದೇಶಿಸಿದರು. ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಯಿತು. ನಗರದ ಪ್ರಮುಖ ಆಸ್ಪತ್ರೆಗೆ ಕೂಡ ವಿಪರೀತ ಹಾನಿಯಾಗಿದೆ. ಆದರೆ, ಸಿಬ್ಬಂದಿ ಹಾಗೂ ರೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕರಾವಳಿ ತೀರದಿಂದ 10 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸ ಲಾಗಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ವಿಪತ್ತು ನಿರ್ವಹಣಾ ಸಿಬ್ಬಂದಿ ನಿಯೋಜಿಸಲಾಗಿದೆ. ಮೇ 15ರ ವರೆಗೆ ಯಾವುದೇ ರಜೆ ತೆಗೆದುಕೊಳ್ಳದಂತೆ ವೈದ್ಯರಿಗೆ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.