ಶ್ರೀಲಂಕಾ ಸ್ಫೋಟ: ಸದ್ಭಾವನಾ ವೇದಿಕೆಯಿಂದ ಶ್ರದ್ಧಾಂಜಲಿ
ಮಂಗಳೂರು, ಮೇ 3: ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಮಂಗಳೂರು ವತಿಯಿಂದ ಸಂತ್ರಸ್ತರ ಕುಟುಂಬಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮತ್ತು ಮೃತರಿಗೆ ಸಂತಾಪ ಸೂಚಿಸುವ ಕಾರ್ಯಕ್ರಮವನ್ನು ನಗರದ ಮಾರ್ನಮಿಕಟ್ಟೆ ವೃತ್ತದ ಬಳಿ ಹಮ್ಮಿಕೊಂಡಿತು.
ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಜೆ.ವಿ.ಡಿವೆಲ್ಲೊ, ಅಸತ್ಯದಿಂದ ಸತ್ಯದೆಡೆಗೆ, ಅಂಧಕಾರದಿಂದ ಬೆಳಕಿನೆಡೆಗೆ ಸಾಗಬೇಕು ಎನ್ನುವುದು ಪ್ರಭುಯೇಸು ಕರೆಯೋಲೆ. ಕಳೆದ 21ರಂದು ಯೇಸು ಮರಣ ಜಯಿಸಿ ಪುನರ್‌ಜೀವಿತಗೊಂಡ ದಿನ. ಚರ್ಚ್‌ನಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಲು ಒಗ್ಗೂಡಿದಾಗ ಅಮಾನುಷವಾಗಿ ಹತ್ಯೆಗೈದದ್ದು ಕರಾಳದಿನ ಎಂದು ಬೇಸರ ವ್ಯಕ್ತಪಡಿಸಿದರು.
ಈ ಘಟನೆಯಲ್ಲಿ ಮರಣ ಹೊಂದಿರುವ ಹಾಗೂ ಅವಯವಗಳನ್ನು ಕಳೆದುಕೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ದೇವರು ಕರುಣೆ ತೋರಿ ಬೇಗನೆ ಗುಣವಾಗಲಿ ಎಂದು ಶುಭ ಹಾರೈಸಿದರು.
ಇಂತಹ ಘಟನೆಗಳು ಚರ್ಚ್, ಮಂದಿರ, ಮಸೀದಿಗಳಲ್ಲಿ ಯಾವುದೇ ವೇಳೆಯಲ್ಲಿ ಸಂಭವಿಸಬಹುದು. ಅವುಗಳನ್ನು ಪ್ರತಿಭಟಿವುದು ಎಲ್ಲ ನಾಗರಿಕರ ಕರ್ತವ್ಯ. ದುಖಿತರನ್ನು ಸಾಂತ್ವನಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ಮತಾಂಧರು ಮನುಷ್ಯರನ್ನು ಕೊಂದು ಸ್ವರ್ಗವನ್ನು ಪ್ರವೇಶಿಸಬಹುದೆಂದು ಅಮಾಕರರನ್ನು ಕೊಂದು, ಅಸತ್ಯವನ್ನು ಸತ್ಯವನ್ನಾಗಿ ತೋರಿಸುವುದು ಸರಿಯಲ್ಲ ಎಂದರು.
ಸದ್ಭಾವನಾ ವೇದಿಕೆಯ ಅಧ್ಯಕ್ಷ ಎಂ.ವಿ. ಸುರೇಶ್ ಮಾತನಾಡಿ, ಶ್ರೀಲಂಕಾದ ಶಾಂತಿ ಕದಡುವ ನಿಟ್ಟಿನಲ್ಲಿ ಸರಣಿ ಬಾಂಬ್ ಸ್ಫೋಟದಂತಹ ಕೃತ್ಯ ನಡೆದಿದೆ. ಈ ಸಂದರ್ಭ ನಮ್ಮ ನಡುವಿನ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಸಂತ್ರಸ್ತರಿಗೆ ನೈತಿಕ ಬೆಂಬಲ ಸೂಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಫಾ.ಮೈಕಲ್ ಸಂತು ಮೈಯರ್, ಸಾಹಿತಿ, ಪತ್ರಕರ್ತ ಎ.ಕೆ.ಕುಕ್ಕಿಲ, ಕಾರ್ಯಕ್ರಮ ಸಂಚಾಲಕ ದೀಪಕ್ ದಿಸೋಜ, ಸದ್ಭಾವನಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಲೇಹ್ ಮುಹಮ್ಮದ್, ಶೋಭಾ, ರಂಜನ್ ಕೆ.ಎಸ್., ಎಂ.ಐ. ಖಲೀಲ್, ಜಸೊನ್ ಎ. ಪೀಟರ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.