×
Ad

2013ರ ಸರ್ಜಿಕಲ್ ದಾಳಿಯನ್ನು ವೀಡಿಯೊ ಗೇಮ್‌ಗೆ ಹೋಲಿಸಿದ ಮೋದಿಯಿಂದ ಸೇನೆಗೆ ಅವಮಾನ: ಕಾಂಗ್ರೆಸ್

Update: 2019-05-04 09:25 IST
ರಣದೀಪ್ ಸಿಂಗ್ ಸುರ್ಜೇವಾಲಾ

 ಹೊಸದಿಲ್ಲಿ, ಮೇ 4: ಸಶಸ್ತ್ರ ಪಡೆಗಳು 2013ರಲ್ಲಿ ನಡೆಸಿದ ಸರ್ಜಿಕಲ್ ದಾಳಿಯನ್ನು "ಕಾಗದ ಮತ್ತು ವೀಡಿಯೊ ಗೇಮ್"ಗೆ ಹೋಲಿಸುವ ಮೂಲಕ ಮತ್ತು ಅಂದಿನ ಸೇನಾ ಮುಖ್ಯಸ್ಥ ಹೇಳಿಕೆಯನ್ನು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಸೇನೆಯನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಯುಪಿಎ ಆಡಳಿತಾವಧಿಯಲ್ಲೂ ಸರ್ಜಿಕಲ್ ದಾಳಿ ನಡೆದಿತ್ತು ಎಂಬ ಕಾಂಗ್ರೆಸ್ ಹೇಳಿಕೆಯನ್ನು ಅಣಕಿಸಿದ ಮೋದಿ, ಸಿಕರ್‌ನಲ್ಲಿ ಶುಕ್ರವಾರ ನಡೆದ ರ್ಯಾಲಿಯಲ್ಲಿ, ಅದು ವೀಡಿಯೊ ಗೇಮ್ ಅಲ್ಲ ಎಂದು ಹೇಳಿದ್ದರು.

"ಪ್ರಧಾನಿ ಮೋದಿಯವರೇ ನಮ್ಮ ಸಶಸ್ತ್ರ ಪಡೆಗಳ ವೀರ ಯೋಧರನ್ನು ನೀವು ಅವಮಾನಿಸಿದ್ದೀರಿ. ಮೋದಿಯವರು ರಾಜಸ್ಥಾನದ ಸಿಕರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸರ್ಜಿಕಲ್ ದಾಳಿಯನ್ನು ಕಾಗದ ಮತ್ತು ವೀಡಿಯೊ ಗೇಮ್‌ಗೆ ಹೋಲಿಸಿರುವುದು ನಮ್ಮ ಸೈನಿಕರ ಅದಮ್ಯ ಧೈರ್ಯ ಹಾಗೂ ಸಾಹಸಕ್ಕೆ ಮಾಡಿದ ಅವಮಾನ" ಎಂದು ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದ್ದಾರೆ.

ವಿಷಾದದ ಸಂಗತಿಯೆಂದರೆ 2013ರ ಡಿಸೆಂಬರ್ 23ರಂದು ನಡೆಸಿದ ಸರ್ಜಿಕಲ್ ದಾಳಿ ಬಗ್ಗೆ ಜನರಲ್ ವಿಕ್ರಂ ಸಿಂಗ್ ನೀಡಿದ ಹೇಳಿಕೆಯಲ್ಲೂ ಮೋದಿ ದೋಷ ಕಂಡುಹಿಡಿದಿದ್ದಾರೆ. ಇದು 2019ರ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಪ್ರಧಾನಿಯವರ ರಾಜಕೀಯ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮೋದಿಯವರು ಡೋಂಗಿ ರಾಷ್ಟ್ರೀಯವಾದವನ್ನು ಅನುಸರಿಸುತ್ತಿದ್ದು, ಬಿಜೆಪಿ ತಮ್ಮ ರಾಜಕೀಯ ಪ್ರಚಾರಕ್ಕೆ ಮತ್ತು ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪ್ರಕಟನೆಯಲ್ಲಿ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News